ಮಂಗಳೂರು, ಎ23(Daijiworld News/SS): ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್ವೆಲ್ತ್ ಪವರ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಪದಕ ಗೆದ್ದು ದಾಖಲೆ ನಿರ್ಮಿಸಿದ್ದ ಮಂಗಳೂರಿನ ಪ್ರದೀಪ್ ಆಚಾರ್ಯ ಈ ಬಾರಿ ಹಾಂಗ್ಕಾಂಗ್ನಲ್ಲಿ ನಡೆದ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ (2019) 2 ಬೆಳ್ಳಿಯ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಪವರ್ ಲಿಫ್ಟಿಂಗ್ ಹಾಗೂ ಬೆಂಚ್ಪ್ರೆಸ್ ಚಾಂಪಿಯನ್ ಶಿಪ್ನ 74 ಕೆಜಿ ಸೀನಿಯರ್ ವಿಭಾಗದಲ್ಲಿ (ಬೆಂಚ್ಪ್ರೆಸ್ ಹಾಗೂ ಪವರ್ ಲಿಫ್ಟಿಂಗ್) 710 ಕೆಜಿ ಭಾರ ಎತ್ತುವ ಮೂಲಕ ಎರಡು ಬೆಳ್ಳಿಯ ಪದಕಗಳಿಗೆ ಪ್ರದೀಪ್ ಆಚಾರ್ಯ ಕೊರಳೊಡ್ಡಿದ್ದಾರೆ.
ಅಂತರರಾಷ್ಟ್ರೀಯ ಪವರ್ ಲಿಫ್ಟರ್ ಆಗುವ ಕನಸನ್ನು ನನಸು ಮಾಡಿಕೊಂಡಿರುವ ಪ್ರದೀಪ್ ಆಚಾರ್ಯ, ಈ ಹಿಂದೆ ನಾಲ್ಕು ಬಾರಿ ಅಂತರರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಸಾಧನೆಯ ಮೂಲಕ ಕುಡ್ಲದ ಜನರ ಮನ ಗೆದ್ದಿದ್ದರು. ವಿಶ್ವ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ ದೇಶ ಪ್ರತಿನಿಧಿಸಬೇಕೆಂಬ ಕನಸು ಪ್ರದೀಪ್ ಆಚಾರ್ಯ ಅವರದಾಗಿತ್ತು.
2017ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್ ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ ಎರಡು ಚಿನ್ನ, ಬೆಳ್ಳಿ ಗೆದ್ದು ಅಪೂರ್ವ ಸಾಧನೆ ಮಾಡಿದ್ದರು. ಕೇರಳದ ಅಲೆಪಿಯಲ್ಲಿ ನಡೆದ ಪವರ್ಲಿಫ್ಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕಂಚು, 2018ರಲ್ಲಿ ದುಬೈನಲ್ಲಿ ನಡೆದ ಏಷ್ಯನ್ ಬೆಂಚ್ಪ್ರೆಸ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಕಂಚು, ಆಸ್ಟ್ರೇಲಿಯಾ ಗೋಲ್ಡ್ಕೊಸ್ಟ್ನಲ್ಲಿ 2 ಚಿನ್ನ ಪಡೆದಿದ್ದರು. ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳು ಇವರಿಗೆ ಬಂದಿದ್ದು, ರಾಷ್ಟ್ರಮಟ್ಟದಲ್ಲಿ 8ಕ್ಕೂ ಮಿಕ್ಕಿ ಚಿನ್ನದ ಪದಕಗಳು ಪ್ರದೀಪ್ ಆಚಾರ್ಯ ಅವರಿಗೆ ಸಂದಿವೆ.
ಪವರ್ ಲಿಫ್ಟರ್ ಸತೀಶ ಕುಮಾರ್ ಕುದ್ರೋಳಿ ಅವರಿಂದ ಮಾರ್ಗದರ್ಶನ ಪಡೆದು, ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಿದ್ದರು.