ಆಸ್ಟ್ರೇಲಿಯಾ, ಜ 19(DaijiworldNews/AA): ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕತ್ವ ಸ್ಥಾನದಿಂದ ಆಸ್ಟ್ರೇಲಿಯಾ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಕೆಳಗಿಳಿಯಲು ನಿರ್ಧಾರ ಮಾಡಿದ್ದಾರೆ.
ಬಿಗ್ ಬ್ಯಾಷ್ ಟಿ20 ಲೀಗ್ 2024 ರಲ್ಲಿ ಮ್ಯಾಕ್ಸ್ವೆಲ್ ನಾಯಕತ್ವದ ಮೆಲ್ಬೋರ್ನ್ ಸ್ಟಾರ್ಸ್ ತಂಡ ಕಳಪೆ ಪ್ರದರ್ಶನ ನೀಡಿದ್ದು, ತಂಡದ ಈ ಕಳಪೆ ಪ್ರದರ್ಶನವು ಮ್ಯಾಕ್ಸ್ವೆಲ್ ಅವರ ಈ ನಿರ್ಧಾರಕ್ಕೆ ಕಾರಣವಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಈ ಆವೃತ್ತಿಯ ಬಿಗ್ ಬ್ಯಾಷ್ ಟಿ20 ಲೀಗ್ ಇದೀಗ ಅಂತಿಮ ಹಂತವನ್ನು ತಲುಪಿದೆ. ಈ ಮಧ್ಯೆ ಅವರು ಈ ನಿರ್ಧಾರವನ್ನು ತೆಗೆದುಕೊಂಡಿರುವುದು ಅಘಾತಕಾರಿ ವಿಷಯವಾಗಿದೆ.
2018ರಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ಮ್ಯಾಕ್ಸ್ವೆಲ್ ಈ ಆವೃತ್ತಿಯಲ್ಲಿ ತಂಡದ ಕಳಪೆ ಪ್ರದರ್ಶನದ ಜವಬ್ದಾರಿ ಹೊತ್ತು ನಾಯಕತ್ವ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿರುವುದಾಗಿ ತಮ್ಮ ತಂಡದ ಆಟಗಾರರಿಗೆ ತಿಳಿಸಿದ್ದಾರೆ. ಜೊತೆಗೆ ಮುಂದಿನ ಆವೃತ್ತಿಯಿಂದ ತಂಡದಲ್ಲಿ ಕೇವಲ ಆಟಗರರಾಗಿ ಆಡಲಿದ್ದಾರೆ ಎಂದು Cricket.com AU ವರದಿಮಾಡಿದೆ.
ಈ ಆವೃತ್ತಿಯಲ್ಲಿ ಆಡಿದ ಮೊದಲ ನಾಲ್ಕು ಪಂದ್ಯಗಳನ್ನು ಮ್ಯಾಕ್ಸ್ವೆಲ್ ನಾಯಕತ್ವದ ತಂಡ ಸತತವಾಗಿ ಗೆದ್ದಿತ್ತು. ಇದರೊಂದಿಗೆ ತಂಡ ಪ್ಲೇ ಆಫ್ ಗೆ ತಲುಪುದು ಆದಷ್ಟು ಖಚಿತವಾಗಿತ್ತು. ಆದರೆ ಲೀಗ್ ಹಂತದ ಕೊನೆಯ 3 ಪಂದ್ಯಗಳನ್ನು ಸೋತು ತಂಡ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಗುಳಿದಿದೆ. ಈ ಆವೃತ್ತಿಯಲ್ಲಿ ಮ್ಯಾಕ್ಸ್ವೆಲ್ ನಾಯಕತ್ವದ ತಂಡ ಒಟ್ಟು 10 ಪಂದ್ಯಗಳನ್ನು ಆಡಿದ್ದು, ಆಡಿದ 10 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದು, ಇನ್ನುಳಿದ 6 ಪಂದ್ಯಗಳನ್ನು ಸೋತಿದೆ. ಇದರಿಂದ ಅಂಕಪಟ್ಟಿಯಲ್ಲಿ 6ನೇ ಸ್ಥಾನವನ್ನು ಗಳಿಸಿದೆ.