ನವದೆಹಲಿ,ಏ 24 (Daijiworld News/MSP): ಐಪಿಎಲ್ ಪ್ರೀಮಿಯರ್ ಲೀಗ್ ನ ನಡುವೆ ಬಿಸಿಸಿಐ ಆಯೋಜಿಸುತ್ತಿರುವ ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಒಟ್ಟಾರೆ ಈ ಬಾರಿ 3 ಟೀಂ ಸ್ಪರ್ಧೆಗಿಳಿಯಲಿದ್ದು, ಫೈನಲ್ ಸೇರಿ 4 ಪಂದ್ಯಾಟ ನಡೆಯಲಿವೆ.
ಈಗ ನಡೆಯುತ್ತಿರುವ ಐಪಿಎಲ್ ಪ್ರೀಮಿಯರ್ ಲೀಗ್ ನ ಪಂದ್ಯಾಟದ ನಿಗದಿತ ಸಮಯದಲ್ಲೇ ಮಹಿಳಾ ಟಿ-20 ಪಂದ್ಯಾಟ ನಡೆಯಲಿದೆ ಎಂದು ಬಿಸಿಸಿಐ ಹೇಳಿದೆ. ಈ ನಡುವೆ ಮೂರು ಕ್ರಿಕೆಟ್ ತಂಡಗಳ ನಾಯಕಿಯರ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಈ ಮೂರು ತಂಡಗಳನ್ನು ಮಿಥಾಲಿ ರಾಜ್, ಹರ್ಮನ್ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧನಾ ಮುನ್ನಡೆಸಲಿದ್ದಾರೆ.
ಮಹಿಳಾ ಕ್ರಿಕೆಟ್ ಪಟುಗಳ ಪ್ರತಿಭೆಯನ್ನು ಬೆಳಕಿಗೆ ತರುವ ಉದ್ದೇಶದಿಂದ ಈ ಮ್ಯಾಚ್ ಗಳು ನಡೆಯಲಿವೆ ಎಂದು ಬಿಸಿಸಿಐ ತಿಳಿಸಿದ್ದು, ಮೇ 6 ರಂದು ಸೂಪರ್ ನೋವಾ ಹಾಗೂ ಟ್ರಯಲ್ ಬ್ಲೇಜರ್ಸ್ ಮಧ್ಯೆ ಪಂದ್ಯ ನಡೆಯಲಿದ್ದು, ಇನ್ನೊಂದೆಡೆ ವಲೋಸಿಟಿ ತಂಡ ಸೂಪರ್ ನೋವಾ್ ಟೀಂ ಜೊತೆ ಮೇ 8 ರಂದು ಸೆಣೆಸಾಡಲಿದೆ. ಈ ಎಲ್ಲಾ ಮ್ಯಾಚ್ ಗಳು ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿವೆ.