ವಿಶಾಖಪಟ್ಟಣ, ಫೆ 02 (DaijiworldNews/AA): ಪ್ರವಾಸಿ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯವು ವಿಶಾಖಪಟ್ಟಣದಲ್ಲಿ ಇಂದು ಪ್ರಾರಂಭವಾಗಿದ್ದು, ಟೀಂ ಇಂಡಿಯಾದಿಂದ ವೇಗಿ ಮೊಹಮ್ಮದ್ ಸಿರಾಜ್ ಹೊರಬಿದ್ದಿದ್ದಾರೆ.
ಬ್ಯಾಟರ್ ಕೆಎಲ್ ರಾಹುಲ್ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಗಾಯಗೊಂಡಿದ್ದು, ಈ ಕಾರಣದಿಂದ ಅವರು ವಿಶಾಖಪಟ್ಟಣ ಪಂದ್ಯದಿಂದ ದೂರ ಉಳಿದಿದ್ದರು. ಆದರೆ ಇದೀಗ ಅವರಿಬ್ಬರೊಂದಿಗೆ ಮೊಹಮ್ಮದ್ ಸಿರಾಜ್ ಕೂಡ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವುದಿಲ್ಲ.
ಇನ್ನು ಸಿರಾಜ್ ಅವರು ತಂಡ ತೊರೆಯಲು ಬಿಸಿಸಿಐ ಕಾರಣ ತಿಳಿಸಿದ್ದು, "ಸರಣಿಯ ಅವಧಿ ಹಾಗೂ ಇತ್ತೀಚಿನ ದಿನಗಳಲ್ಲಿ ಅವರು ಆಡಿದ ಕ್ರಿಕೆಟ್ ಮೊತ್ತವನ್ನು ಗಣನೆಗೆ ತೆಗೆದುಕೊಂಡು ಈ ನಿರ್ಧಾರ ಮಾಡಲಾಗಿದೆ. ಅವರು ರಾಜ್ ಕೋಟ್ ನಲ್ಲಿ ನಡೆಯುವ 3ನೇ ಟೆಸ್ಟ್ ಗೆ ಆಯ್ಕೆಗೆ ಲಭ್ಯವಿದ್ದಾರೆ. 2ನೇ ಟೆಸ್ಟ್ ಗೆ ಅವೇಶ್ ಖಾನ್ ಟೀಂ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ" ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಟೀಂ ಇಂಡಿಯಾದಿಂದ ಹೊರಗುಳಿದಿರುವ ಕೀಲ್ ರಾಹುಲ್ ಬದಲಿಗೆ ರಜತ್ ಪಟಿದಾರ್, ರವೀಂದ್ರ ಜಡೇಜಾ ಅವರ ಬದಲಿಗೆ ಕುಲದೀಪ್ ಯಾದವ್ ಹಾಗೂ ಸಿರಾಜ್ ಬದಲಿಗೆ ಮುಖೇಶ್ ಕುಮಾರ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.