ಫೆ, 3(DaijiworldNews/SK): ಭಾರತದ ಜನಪ್ರಿಯ ಒಟಿಟಿ ವೇದಿಕೆಯಾಗಿರುವ ಜಿಯೊಸಿನಿಮಾ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಜೊತೆಗೆ ಸಹಭಾಗಿತ್ವವನ್ನು ಘೋಷಿಸಿದ್ದು, ಇದರ ಭಾಗವಾಗಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ ಹತ್ತನೇ ಸೀಸನ್ ಅನ್ನು ಜಿಯೊಸಿನಿಮಾ ಎಕ್ಸ್ ಕ್ಲ್ಯೂಸಿವ್ ಆಗಿ ನೇರಪ್ರಸಾರ ಮಾಡಲಿದೆ.
ಫೆ. 23ರಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆರಂಭವಾಗಲಿದೆ. ಈ ಬಾರಿಯ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತದ ಎಂಟು ಮುಖ್ಯ ಚಿತ್ರರಂಗವನ್ನು ಪ್ರತಿನಿಧಿಸುವ ತಂಡಗಳಾದ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಭೋಜಪುರಿ ಮತ್ತು ಪಂಜಾಬ್ ತಂಡಗಳು ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಭಾಗವಹಿಸಲಿದ್ದು, ನಾಲ್ಕು ವಾರಾಂತ್ಯಗಳಲ್ಲಿ ನಡೆಯಲಿರುವ ಸಿಸಿಎಲ್ 10ನೇ ಸೀಸನ್ನಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿವೆ.
ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ ‘ಕರ್ನಾಟಕ ಬುಲ್ಡೋಜರ್ಸ್’ ತಂಡಕ್ಕೆ ನಾಯಕರಾಗಿರುವ ಕಿಚ್ಚ ಸುದೀಪ್. ಬಿಗ್ಬಾಸ್ ಕನ್ನಡ ಸೀಸನ್ 10 ಅನ್ನು ಈಗಷ್ಟೇ ಮುಗಿಸಿದ್ದು, ಮತ್ತೊಮ್ಮೆ ಸಿಸಿಎಲ್ 10 ಮೂಲಕ ಜಿಯೊಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮುಂಬೈ ಹೀರೋಸ್ ತಂಡಕ್ಕೆ ಸಲ್ಮಾನ್ ಖಾನ್ ಬ್ರಾಂಡ್ ಅಂಬಾಸಿಡರ್ ಆಗಿದ್ದು, ರಿತೇಶ್ ದೇಶಮುಖ್ ತಂಡದ ನಾಯಕರಾಗಿದ್ದಾರೆ. ಸೋಹೈಲ್ ಖಾನ್, ಮುಂಬೈ ಹೀರೊಸ್ ತಂಡದ ಮಾಲೀಕರಾಗಿದ್ದಾರೆ. ‘ತೆಲುಗು ವಾರಿಯರ್ಸ್’ ತಂಡಕ್ಕೆ ವೆಂಕಟೇಶ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅಖಿಲ್ ಅಕ್ಕಿನೇನಿ ‘ತೆಲುಗು ವಾರಿಯರ್ಸ್’ ತಂಡದ ನಾಯಕ.
ಇನ್ನು ಮೋಹನ್ಲಾಲ್ ಸಹ ಮಾಲೀಕರಾಗಿರುವ ‘ಕೇರಳ ಸ್ಟ್ರೈಕರ್ಸ್’ ತಂಡಕ್ಕೆ ಇಂದ್ರಜಿತ್ ನಾಯಕರಾಗಿದ್ದಾರೆ. ‘ಭೋಜಪುರಿ ದಬಾಂಗ್ಸ್’ ತಂಡಕ್ಕೆ ಮನೋಜ್ ತಿವಾರಿ ನಾಯಕರಾಗಿದ್ದು, ‘ಪಂಜಾಬ್ ದೆ ಶೇರ್’ ತಂಡಕ್ಕೆ ಸೋನು ಸೂದ್ ನಾಯಕರಾಗಿದ್ದಾರೆ. ಬೋನಿ ಕಪೂರ್ ಮಾಲೀಕರಾಗಿರುವ ‘ಬೆಂಗಾಲ್ ಟೈಗರ್ಸ್’ ತಂಡಕ್ಕೆ ಜಿಸ್ಸು ಸೆನ್ಗುಪ್ತ ನಾಯಕರಾಗಿದ್ದಾರೆ.