ನವದೆಹಲಿ, ಫೆ 07 (DaijiworldNews/AA): ಕ್ರೀಡಾಪಟುಗಳು ಒಬ್ಬರನ್ನೊಬ್ಬರು ಪ್ರೀತಿಸುವುದು, ಮದುವೆಯಾಗುವುದು ಸಾಮಾನ್ಯವಾಗಿದೆ. ಇದೀಗ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಹಾಗೂ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಪರಸ್ಪರ ಪ್ರೀತಿಸುತ್ತಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.
ಹೌದು ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಹಾಗೂ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಏಕಕಾಲದಲ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಈ ಗೊಂದಲಕ್ಕೆ ಕಾರಣರಾಗಿದ್ದಾರೆ.
ನೀರಜ್ ಚೋಪ್ರಾ ಇನ್ ಸ್ಟಾಗ್ರಾಮ್ ನಲ್ಲಿ ರಾಕೆಟ್ ಹಾಗೂ ಕಾಕ್ ನ ಪೋಟೋ ಹಂಚಿಕೊಂಡಿದ್ದು, ಇದರ ಅರ್ಥ ಏನು ಊಹಿಸುವಿರಾ? ಎಂದು ಪ್ರಶ್ನಿಸಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಈ ಪೋಸ್ಟ್ ಅನ್ನು ಪಿವಿ ಸಿಂಧು ಅವರಿಗೆ ಟ್ಯಾಗ್ ಮಾಡಿದ್ದಾರೆ. ಇನ್ನೊಂದೆಡೆ ಪಿವಿ ಸಿಂಧು ಅವರು ಇನ್ ಸ್ಟಾಗ್ರಾಮ್ ನಲ್ಲಿ ಜಾವೆಲಿನ್ ಫೋಟೋ ಹಂಚಿಕೊಂಡಿದ್ದು, ಅರೇ ಇದು ಹೇಗೆ ನನ್ನ ಬಳಿ ಬಂತು? ಊಹೆ ಮಾಡುತ್ತೀರಾ ಎಂದು ಪ್ರಶ್ನಿಸಿ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ಪೋಸ್ಟ್ ಅನ್ನು ನೀರಜ್ ಚೋಪ್ರಾ ಅವರಿಗೆ ಟ್ಯಾಗ್ ಕೂಡ ಮಾಡಿದ್ದಾರೆ.
ಇನ್ನು ಇವರಿಬ್ಬರು ಇನ್ ಸ್ಟಾಗ್ರಾಮ್ ನಲ್ಲಿ ಈ ರೀತಿಯಾಗಿ ಪೋಸ್ಟ್ ಮಾಡಲು ಬೇರೆಯದ್ದೇ ಕಾರಣವಿದೆ. ಈ ತಾರೆಯರು ಜಾಗತಿಕ ಪೇಮೆಂಟ್ ಕಂಪನಿ ವೀಸಾ ಪ್ರಚಾರಕ್ಕಾಗಿ ಈ ರೀತಿಯಾಗಿ ಪೋಸ್ಟ್ ಮಾಡಿದ್ದಾರೆ. ಈ ಕಂಪನಿ ತನ್ನ ಪ್ರಚಾರದ ರಾಯಭಾರಿಯನ್ನಾಗಿ ನೀರಜ್ ಚೋಪ್ರಾ ಅವರನ್ನು ನೇಮಕ ಮಾಡಿದೆ. ಈ ಹಿಂದೆ ಪಿವಿ ಸಿಂಧೂ ಅವರು ವೀಸಾ ಕಂಪನಿಯ ಪ್ರಚಾರ ರಾಯಭಾರಿಯಾಗಿದ್ದರು. ಇದೀಗ ನೀರಜ್ ಚೋಪ್ರಾ ಅವರು ಆಯ್ಕೆಯಾಗುವ ಮೂಲಕ ವೀಸಾ ಕಂಪನಿಯ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾದ ಎರಡನೇ ಭಾರತೀಯ ಕ್ರೀಡಾಪಟುವಾಗಿದ್ದಾರೆ.