ರಾಂಚಿ, ಫೆ 19(DaijiworldNews/AA): ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯವು ಫೆಬ್ರವರಿ 23 ರಿಂದ ರಾಂಚಿಯಲ್ಲಿ ಪ್ರಾರಂಭವಾಗಲಿದೆ. ಈ ಪಂದ್ಯದಿಂದ ಟೀಂ ಇಂಡಿಯಾದ ಸ್ಟಾರ್ ಆಟಗಾರನೋರ್ವ ಹೊರಗುಳಿಯಲಿದ್ದಾರೆ.
ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇದಕ್ಕೆ ಮ್ಯಾನೇಜ್ ಮೆಂಟ್ ಕೂಡ ಅನುಮತಿ ನೀಡಿದ್ದು, ಈ ಮೂಲಕ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದೆ. ಇನ್ನು ಇಂಗ್ಲೆಂಡ್ ಸರಣಿಯ 3ನೇ ಟೆಸ್ಟ್ ಪಂದ್ಯಕ್ಕೆ ವಿಶ್ರಾಂತಿ ಪಡೆಯಬೇಕಿದ್ದ ಬುಮ್ರಾ ಅವರು ಇದೀಗ 4ನೇ ಟೆಸ್ಟ್ ನಿಂದ ಹೊರಗುಳಿಯಲಿದ್ದಾರೆ.
ಬುಮ್ರಾ ಅವರು ಧರ್ಮಶಾಲಾದಲ್ಲಿ ನಡೆಯಲಿರುವ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೋ ಇಲ್ಲವೋ ಎಂಬುದು ಬಳಿಕ ನಿರ್ಧಾರವಾಗಲಿದೆ. ಈ ನಿರ್ಧಾರವು 4ನೇ ಟೆಸ್ಟ್ ಪಂದ್ಯದ ಫಲಿತಾಂಶವನ್ನು ಅವಲಂಬಿಸಿರುತ್ತದೆ ಎಂದು ತಿಳಿದುಬಂದಿದೆ.
4ನೇ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡವು ರಾಜ್ ಕೋಟ್ ನಿಂದ ರಾಂಚಿಗೆ ಫೆಬ್ರವರಿ 20 ರಂದು ತೆರಳಲಿದೆ. ಬುಮ್ರಾ ಅವರು ತಂಡದೊಂದಿಗೆ ರಾಂಚಿಗೆ ತೆರಳುವ ಸಾಧ್ಯತೆ ಇಲ್ಲ. ಅವರು ಇಂದು ರಾಜ್ ಕೋಟ್ ನಿಂದ ಅಹಮದಾಬಾದ್ ಗೆ ಪ್ರಯಾಣಿಸಲಿದ್ದಾರೆ. ಇನ್ನು ಬೇರೆ ಯಾವುದೇ ಆಟಗಾರ ಮುಂದಿನ ಟೆಸ್ಟ್ ನಿಂದ ಹೊರಗುಳಿದಿರುವ ಬಗ್ಗೆ ಮಾಹಿತಿ ಲಭಿಸಿಲ್ಲ ಎಂದು ವರದಿಯಾಗಿದೆ.