ನವದೆಹಲಿ,ಏ 27(Daijiworld News/MSP): ಐಸಿಸಿ ಇತ್ತೀಚೆಗೆ ಕ್ರಿಕೆಟ್ ನಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಕ್ರಿಕೆಟ್ನಲ್ಲಿ ಮಹಿಳೆಯರಿಗೆ ಎಲ್ಲಾ ರೀತಿಯ ಸ್ಥಾನಮಾನ ನೀಡುವ ದೃಷ್ಟಿಯಿಂದ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಮಹಿಳೆಯೊಬ್ಬರು ಪುರುಷರ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ.
ಹೌದು. ಕ್ರಿಕೆಟ್ ಜಗತ್ತಿನಲ್ಲಿ ಇಂತಹದ್ದೊಂದು ಇತಿಹಾಸ ನಿರ್ಮಾಣವಾಗಿದೆ. ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ ಮೊದಲ ಮಹಿಳಾ ಅಂಪೈರ್ ಎಂಬ ಕೀರ್ತಿಗೆ ಕ್ಲೈರ್ ಪೊಲೊಸಾಕ್ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾ ಮೂಲದ 29 ವರ್ಷದ ಕ್ಲೇರ್ ಪೊಲೊಸಾಕ್ ನಮೀಬಿಯಾ ಹಾಗೂ ಓಮನ್ ನಡುವೆ ನಡೆದ ವಿಶ್ವ ಕ್ರಿಕೆಟ್ ಲೀಗ್ ನ ಎರಡನೇ ಡಿವಿಷನ್ ಫೈನಲ್ ಪಂದ್ಯದಲ್ಲಿ ಕ್ಲೈರ್ ಪೊಲೊಸಾಕ್ ಅವರು ಅಂಪೈರಿಂಗ್ ಸೇವೆ ಸಲ್ಲಿಸಿದ್ದಾರೆ. ಆ ಮೂಲಕ ಪುರುಷರ ಏಕದಿನ ಪಂದ್ಯದಲ್ಲಿ ಸೇವೆ ಸಲ್ಲಿಸಿದ ವಿಶ್ವದ ಮೊದಲ ಮಹಿಳಾ ಅಂಪೈರ್ ಎಂಬ ಕೀರ್ತಿಗೆ ಆಸ್ಟ್ರೇಲಿಯಾದ ಕ್ಲೈರ್ ಭಾಜನರಾಗಲಿದ್ದಾರೆ.
ವಿಶೇಷ ಎಂದರೆ ಇಲ್ಲಿಯವರೆಗೆ ಕ್ಲೈರ್ ಯಾವುದೇ ಹಂತದ ಕ್ರಿಕೆಟ್ ಪಂದ್ಯಾಟವನ್ನು ಆಡಿಲ್ಲ. ಆದರೆ ಅವರು ಕ್ರಿಕೆಟ್ ಪಂದ್ಯಾಟವನ್ನು ಕುತೂಹಲದಿಂದ ಪಂದ್ಯಗಳನ್ನು ವೀಕ್ಷಣೆ ಮಾಡುವುದನ್ನು ಕಂಡು ಅವರ ತಂದೆ ಗೊಲ್ಬರ್ನ್ನಲ್ಲಿ ಇರುವ ಅಂಪೈರ್ ಕೋರ್ಸ್ಗೆ ಸೇರಿಸಿದರು. ವಿಶೇಷ್ ಎಂದರೆ ಇವರು ಹಲವು ಬಾರಿ ಅಂಪೈರ್ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದರು.
2017ರಲ್ಲಿ ಆಸ್ಟ್ರೇಲಿಯಾ ದೇಶೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯ ಇವರು ಕೆಲಸಮಾಡಿದ್ದಾರೆ. ಆದರೆ ಇದೇ ಪ್ರಥಮ ಬಾರಿಗೆ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಅಂಪೈರ್ ಆಗಿ ಕಾರ್ಯ ನಿರ್ವಹಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.