ಮುಂಬೈ, ಏ. 20(DaijiworldNews/AA): ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ತಂಡದ ಬ್ಯಾಟಿಂಗ್ ಕೋಚ್ ಕೀರಾನ್ ಪೊಲಾರ್ಡ್ ಹಾಗೂ ತಂಡದ ಬ್ಯಾಟಿಂಗ್ ಆಲ್ರೌಂಡರ್ ಟಿಮ್ ಡೇವಿಡ್ ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಬಿಸಿಸಿಐ ದಂಡ ವಿಧಿಸಿದೆ.
ಏಪ್ರಿಲ್ 18ರಂದು ನಡೆದ ಮುಂಬೈ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಈ ಇಬ್ಬರು ಐಪಿಎಲ್ ನಿಯಮವನ್ನು ಮುರಿದು ಸ್ಟ್ರೈಕ್ನಲ್ಲಿದ್ದ ಸೂರ್ಯಕುಮಾರ್ ಗೆ ಡಿಆರ್ ಎಸ್ ತೆಗೆದುಕೊಳ್ಳುವಂತೆ ಸನ್ನೆ ಮಾಡಿದ್ದರು. ಈ ಇಬ್ಬರ ಮೋಸದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
ಇನ್ನು ಈ ಇಬ್ಬರು ಸನ್ನೆ ನೀಡುತ್ತಿರುವುದನ್ನು ಗಮನಿಸಿದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಸ್ಯಾಮ್ ಕರನ್ ಈ ವಿಚಾರವನ್ನು ಫೀಲ್ಡ್ ಅಂಪೈರ್ ಗೆ ತಿಳಿಸಿದ್ದರು. ಆದರೆ ಆ ವೇಳೆ ಫೀಲ್ಡ್ ಅಂಪೈರ್ ಕರನ್ ಮಾತನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಈ ಇಬ್ಬರ ನಿಯಮ ಉಲ್ಲಂಘನೆಗೆ ಬಿಸಿಸಿಐ ದಂಡ ವಿಧಿಸಿದೆ.