ನವದೆಹಲಿ, ಮೇ.11(DaijiworldNews/AA): ಮೂರು ಪಂದ್ಯಗಳಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಗೆ ಸೇರಿ ಇಡೀ ತಂಡಕ್ಕೆ ಭಾರೀ ದಂಡ ವಿಧಿಸಲಾಗಿದ್ದು, ಪಂತ್ ಅವರನ್ನು ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ.
ಮೇ 7 ರಂದು ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ತಂಡ ನಿಧಾನಗತಿಯ ಬೌಲಿಂಗ್ ನಡೆಸಿತ್ತು. ಇದಕ್ಕಾಗಿ ರಿಷಭ್ ಪಂತ್ ಅವರಿಗೆ 30 ಲಕ್ಷ ರೂ. ದಂಡ ಹಾಗೂ ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ. ಜೊತೆಗೆ ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಉಳಿದ 11 ಸದಸ್ಯರಿಗೆ ತಲಾ 12 ಲಕ್ಷ ರೂ. ಅಥವಾ ಆಯಾ ಪಂದ್ಯ ಶುಲ್ಕದ 50 ಪ್ರತಿಶತದಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಮಂಡಳಿ ತಿಳಿಸಿದೆ.
ಈವರೆಗೆ 12 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಪ್ಲೇ ಆಫ್ ಪ್ರವೇಶಿಸುವ ಹೊತ್ತಲ್ಲಿ ತಂಡಕ್ಕೆ ಭಾರೀ ಆಘಾತ ಉಂಟಾಗಿದೆ. ಮುಂದಿನ ಎರಡೂ ಪಂದ್ಯಗಳು ಡೆಲ್ಲಿ ತಂಡಕ್ಕೆ ನಿರ್ಣಾಯಕ ಪಂದ್ಯವಾಗಲಿದೆ. ಹೀಗಾಗಿ ರಿಷಭ್ ಪಂತ್ ಅವರು ಒಂದು ಪಂದ್ಯದಿಂದ ಅಮಾನತುಗೊಂಡಿರುವುದು ತಂಡಕ್ಕೆ ಹಿನ್ನಡೆಯಾಗಲಿದೆಯೇ ಎಂದು ಕಾದುನೋಡಬೇಕಿದೆ.
ಐಪಿಎಲ್ ನೀತಿ ಸಂಹಿತೆಯ ಪ್ರಕಾರ ಮೊದಲ ಬಾರಿ ನಿಧಾನಗತಿ ಬೌಲಿಂಗ್ ಮಾಡಿದರೆ ನಾಯಕನಿಗೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗುತ್ತದೆ. 2ನೇ ಬಾರಿ ಈ ತಪ್ಪನ್ನು ಮಾಡಿದರೆ ನಾಯಕನಿಗೆ 24 ಲಕ್ಷ ರೂ. ದಂಡದ ಜೊತೆ ಆಟಗಾರರಿಗೂ ದಂಡ ವಿಧಿಸಲಾಗುತ್ತದೆ. 3ನೇ ಬಾರಿಗೆ ದಂಡ ವಿಧಿಸಿದರೆ 30 ಲಕ್ಷ ದಂಡದೊಂದಿಗೆ ಒಂದು ಪಂದ್ಯದಿಂದ ನಾಯಕನನ್ನು ಅಮಾನತುಗೊಳಿಸಲಾಗುತ್ತದೆ. ಹೀಗಾಗಿ ನಾಯಾಕ ರಿಷಭ್ ಪಂತ್ ಅವರಿಗೆ 30 ಲಕ್ಷ ದಂಡದ ಜೊತೆಗೆ ಒಂದು ಪಂದ್ಯದಿಂದ ಅಮಾನತು ಮಾಡಲಾಗಿದೆ.