ಮುಂಬೈ, ಮೇ.12(DaijiworldNews/AA): ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಲೇ ಇದೆ. ಇದೀಗ ಸ್ವತಃ ರೋಹಿತ್ ಶರ್ಮಾ ಅವರೇ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯುವ ಸೂಚನೆ ನೀಡಿದ್ದಾರೆ.
ಶನಿವಾರ ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ತನ್ನ ಮಾಜಿ ಸಹಪಾಠಿ, ಕೆಕೆಆರ್ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಇಬ್ಬರು ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದಲ್ಲಿನ ಸನ್ನಿವೇಶಗಳ ಬಗ್ಗೆ ಮಾತನಾಡಿಕೊಂಡಿದ್ದಾರೆ.
ಅಭಿಷೇಕ್ ಅವರೊಂದಿಗೆ ಮಾತನಾಡುತ್ತಾ ಎಲ್ಲವೂ ಒಂದೊಂದಾಗಿ ಬದಲಾಗುತ್ತಿದೆ. ಏನೇ ಆದರೂ ಅದು ನನ್ನ ಮನೆ. ಆ ಗುಡಿಯನ್ನು ಕಟ್ಟಿದ್ದು ನಾನು. ಈಗ ನಂಗೇನಾಗಬೇಕು? ನನ್ನದು ಇದುವೇ ಮುಂಬೈ ಇಂಡಿಯನ್ಸ್ ಪರ ಕೊನೆಯ ಆವೃತ್ತಿಯಾಗಿದೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
ಇವರಿಬ್ಬರ ನಡುವಿನ ಮಾತುಕತೆಯ ವಿಡಿಯೋವನ್ನು ಸ್ವತಃ ಕೆಕೆಆರ್ ತಂಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಬಳಿಕ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅದನ್ನು ಡಿಲೀಟ್ ಮಾಡಿದೆ. ಏನೇ ಇರಲಿ ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ತಂಡ ತೊರೆಯುತ್ತಾರಾ? ಮುಂಬೈ ಇಂಡಿಯನ್ಸ್ ತಂಡವನ್ನು ತೊರೆದರೆ 2025ರ ಐಪಿಎಲ್ ನಲ್ಲಿ ಯಾವ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂದು ಕಾದುನೋಡಬೇಕಿದೆ.