ಚೆನ್ನೈ, ಮೇ 26 (DaijiworldNews/AA): ಈ ಬಾರಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ಹೆಚ್) ತಂಡಗಳು ಮುಖಾಮುಖಿಯಾಗಲಿದೆ. ಈ ಬಾರಿಯ ಐಪಿಲ್ ಕಪ್ ಅನ್ನು ಯಾವ ತಂಡ ಮುಡಿಗೇರಿಸಿಕೊಳ್ಳಲಿದೆ ಎಂಬ ಕುತೂಹಲಕ್ಕೆ ಇಂದು ತೆರೆಬೀಳಲಿದೆ.
ಫೈನಲ್ ಪಂದ್ಯವು ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿದ್ದು, ಈ ಪಂದ್ಯಕ್ಕೆ ಮೈದಾನ ಸಜ್ಜಾಗಿದೆ. ಉಭಯ ತಂಡಗಳು ಈಗಾಗಲೇ ಎರಡು ಬಾರಿ ಐಪಿಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಹೀಗಾಗಿ ಯಾವ ತಂಡ ಮೂರನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ತನ್ನದಾಗಿಸಿಕೊಳ್ಳಲಿದೆ ಎಂದು ಕಾದುನೋಡಬೇಕಿದ.
ಉಭಯ ತಂಡಗಳು ಈವರೆಗೆ 27 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಕೆಕೆಆರ್ ತಂಡವು 18 ಬಾರಿ ಎಸ್ಆರ್ಹೆಚ್ ತಂಡವನ್ನು ಸೋಲಿಸಿದೆ. ಈ ಬಾರಿ ಆಡಲಾದ ಎರಡೂ ಪಂದ್ಯಗಳನ್ನು ಕೆಕೆಆರ್ ತಂಡ ಗೆದ್ದಿದೆ. ಹೀಗಾಗಿ ಎಸ್ಆರ್ಹೆಚ್ ತಂಡದ ವಿರುದ್ಧ ಕೆಕೆಆರ್ ತಂಡ ಮೇಲುಗೈ ಹೊಂದಿರುವುದು ಸ್ಪಷ್ಟವಾಗಿದೆ.
ಇಂದು ನಡೆಯುವ ಫೈನಲ್ ಪಂದ್ಯಕ್ಕೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ ಕಾರ್ಯಕ್ರಮ ಜರುಗಲಿದೆ. ಸಂಜೆ 6 ಗಂಟೆಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು, ನಟ-ನಟಿಯರು ಪಾಲ್ಗೊಳ್ಳುವ ಸಾಧ್ಯತೆಯಿದೆ.