ಮುಂಬೈ, ಮೇ 28 (DaijiworldNews/AK): ಐಪಿಎಲ್ ಸೀಸನ್ 17 ಮುಕ್ತಾಯದ ಬೆನ್ನಲ್ಲೇ ಈಗ ಐಪಿಎಲ್ ಸೀಸನ್ 18 ರಲ್ಲಿ ಮಹತ್ವದ ಬದಲಾವಣೆ ತರುವಂತಹ ಸುದ್ದಿ ಹೊರಬಿದ್ದಿದೆ. ಮುಂಬರುವ ಐಪಿಎಲ್ ಟೂರ್ನಿಯು 84 ಪಂದ್ಯಗಳನ್ನು ಒಳಗೊಂಡಿರಲಿದೆ. ಈವರಗೆ ಐಪಿಎಲ್ನಲ್ಲಿ ಪ್ಲೇಆಫ್ ಸೇರಿ ಒಟ್ಟು 74 ಪಂದ್ಯಗಳನ್ನಾಡಲಾಗುತ್ತಿತ್ತು.
ಆದರೆ ಮುಂಬರುವ ಸೀಸನ್ಗಳಲ್ಲಿ ಹೆಚ್ಚುವರಿ 10 ಪಂದ್ಯಗಳು ನಡೆಯಲಿದೆ. ಈ ಮೂಲಕ ಒಟ್ಟು 84 ಪಂದ್ಯಗಳ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸುತ್ತಿದೆ.ಮುಂದಿನ ಐಪಿಎಲ್ 2025 ಮತ್ತು 2026 ರಲ್ಲಿ 84 ಪಂದ್ಯಗಳನ್ನು ಆಡಿಸಲಾಗುತ್ತದೆ. ಹಾಗೆಯೇ ಐಪಿಎಲ್ 2027 ರಲ್ಲಿ ಪಂದ್ಯಗಳ ಸಂಖ್ಯೆಯನ್ನು 94 ಕ್ಕೆ ಏರಿಸಲಿದ್ದಾರೆ. ಇದರಿಂದ 2027 ರಲ್ಲಿ ಮತ್ತೆ ಲೀಗ್ ಮಾದರಿಯಲ್ಲೇ ಟೂರ್ನಿ ನಡೆಯಲಿದೆ. ಪ್ರಸ್ತುತ ಐಪಿಎಲ್ ಅನ್ನು ರೌಂಡ್ ರಾಬಿನ್ ಮಾದರಿಯಲ್ಲಿ ಆಯೋಜಿಸಲಾಗುತ್ತಿದೆ.
ಐಪಿಎಲ್ 2021 ರಲ್ಲಿ ಒಟ್ಟು 60 ಪಂದ್ಯಗಳನ್ನು ನಡೆಸಲಾಗಿತ್ತು. ಇದರಲ್ಲಿ 56 ಲೀಗ್ ಪಂದ್ಯಗಳಿದ್ದರೆ, 4 ಪ್ಲೇಆಫ್ ಪಂದ್ಯಗಳನ್ನು ಆಡಿಸಲಾಗಿತ್ತು. ಈ ವೇಳೆ ಪ್ರತಿ ತಂಡಗಳು ಪರಸ್ಪರ ಎರೆಡೆರಡು ಪಂದ್ಯಗಳನ್ನಾಡಿತ್ತು. ಈ ಮೂಲಕ ಲೀಗ್ನಲ್ಲಿ ಎಲ್ಲಾ ತಂಡಗಳು ಪರಸ್ಪರ 2 ಪಂದ್ಯಗಳಂತೆ ಒಟ್ಟು 14 ಪಂದ್ಯಗಳನ್ನಾಡಿದ್ದರು. ಆದರೆ 2022ರಿಂದ ಐಪಿಎಲ್ ಅನ್ನು ರೌಂಡ್ ರಾಬಿನ್ ಸ್ವರೂಪದಲ್ಲಿ ಆಯೋಜಿಸಲಾಗುತ್ತಿದೆ. ಈ ಸ್ವರೂಪವನ್ನೇ ಐಪಿಎಲ್ 2025 ಮತ್ತು 2026 ರಲ್ಲೂ ಮುಂದುವರೆಸಲಾಗುತ್ತದೆ.
ಇನ್ನು ಐಪಿಎಲ್ 2027 ರ ಸೀಸನ್ ಅನ್ನು ಲೀಗ್ ಮಾದರಿಯಲ್ಲೇ ನಡೆಸಲು ಬಿಸಿಸಿಐ ಮುಂದಾಗಿದೆ. ಅಂದರೆ ಎಲ್ಲಾ ತಂಡಗಳು ಪರಸ್ಪರ ಎರೆಡೆರಡು ಪಂದ್ಯಗಳನ್ನು ಆಡಲಿದೆ. ಇಲ್ಲಿ ಯಾವುದೇ ಗ್ರೂಪ್ ಇರುವುದಿಲ್ಲ. ಬದಲಾಗಿ ಒಂದು ತಂಡವು ಉಳಿದ 9 ತಂಡಗಳ ವಿರುದ್ದ ತಲಾ 2 ಪಂದ್ಯಗಳನ್ನು ಆಡಲಿದೆ. ಈ ಮೂಲಕ ಲೀಗ್ ಹಂತದಲ್ಲಿ 90 ಪಂದ್ಯಗಳನ್ನು ಆಡಲಿದೆ.