ಮುಂಬೈ, ಜೂ. 03(DaijiworldNews/AA): ಟೀಮ್ ಇಂಡಿಯಾ ಆಟಗಾರ ಕೇದಾರ್ ಜಾಧವ್ ಅವರು ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಕೇದಾರ್ ಜಾಧವ್ ಅವರು 10 ವರ್ಷಗಳ ತಮ್ಮ ಅಂತಾರಾಷ್ಟ್ರೀಯ ಕೆರಿಯರ್ ವಿದಾಯ ಹೇಳಲು ನಿರ್ಧಾರ ಮಾಡಿದ್ದಾರೆ. ಇದರೊಂದಿಗೆ ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್ಗೂ ನಿವೃತ್ತಿ ಘೋಷಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, 1,500 ಗಂಟೆಗಳ ನನ್ನ ವೃತ್ತಿಜೀವನದುದ್ದಕ್ಕೂ ನೀವು ನೀಡಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ನಾನು ಎಲ್ಲಾ ರೀತಿಯ ಕ್ರಿಕೆಟ್ನಿಂದ ನಿವೃತ್ತನಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.
2014 ರಲ್ಲಿ ಭಾರತ ಪರ ಪಾದಾರ್ಪಣೆ ಮಾಡಿದ ಜಾಧವ್ 2020 ರಲ್ಲಿ ಕೊನೆಯ ಬಾರಿ ಭಾರತದ ಪರವಾಗಿ ಆಡಿದ್ದರು. ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಹಲವು ಬಾರಿ ಕಂಬ್ಯಾಕ್ ಮಾಡಲು ಯತ್ನಿಸಿದರೂ ಭಾರತ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದರಲ್ಲಿ ವಿಫಲರಾಗಿದ್ದರು. ನ್ಯೂಝಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ತಂಡದ ಪರವಾಗಿ ಆಡಿದ ಬಳಿಕ ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ದೊರೆತಿರಲಿಲ್ಲ.