ಸ್ಟಾವೆಂಜರ್, ಜೂ. 08(DaijiworldNews/AA): ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಸ್ಟಾವೆಂಜರ್ನಲ್ಲಿ ನಡೆದ ನಾರ್ವೆ ಚೆಸ್ ಟೂರ್ನಿಯಲ್ಲಿ ತೃತೀಯ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೂನ್ 07 ರಂದು ನಡೆದ ನಾರ್ವೆ ಚೆಸ್ ಟೂರ್ನಿಯ 10ನೇ ಹಾಗೂ ಕೊನೆಯ ಸುತ್ತಿನಲ್ಲಿ ಹಿಕರು ನಕಮುರಾ ಅವರನ್ನು ಸೋಲಿಸಿ ಪ್ರಜ್ಞಾನಂದ ಅವರು ಮೂರನೇ ಸ್ಥಾನ ಗಳಿಸಿದ್ದಾರೆ. ಈ ಹಿಂದೆ ನಡೆದ ಕ್ಲಾಸಿಕಲ್ ಗೇಮ್ನ ಮೂರನೇ ಸುತ್ತಿನಲ್ಲಿ ಆರ್ ಪ್ರಜ್ಞಾನಂದ ಅವರು ವಿಶ್ವದ ನಂಬರ್ 1 ಚದುರಂಗ ಚತುರ ಮ್ಯಾಗ್ನಸ್ ಕಾರ್ಲ್ಸೆನ್ ಅವರನ್ನು ಸೋಲಿಸಿ ಅಗ್ರಸ್ಥಾನ ಪಡೆದುಕೊಂಡಿದ್ದರು.
ನಂತರ ಪ್ರಜ್ಞಾನಂದ ಅವರು ವಿಶ್ವದ 2ನೇ ಶ್ರೇಯಾಂಕಿತ ಫ್ಯಾಬಿಯಾನೊ ಕರುವಾನಾ ಅವರಿಗೆ ಸೋಲುಣಿಸಿದ್ದರು. ಪ್ರಜ್ಞಾನಂದ ಅವರು ಅಲಿರೆಜಾ ಫಿರೋಜ್ಜಾ ವಿರುದ್ಧ ಆಡಿದ ಪಂದ್ಯ ಡ್ರಾ ಆಗಿತ್ತು. ಇನ್ನು 6ನೇ ಸುತ್ತಿನ ಬಳಿಕ ಆರ್. ಪ್ರಜ್ಞಾನಂದ ಅಂಕ ಪಟ್ಟಿಯಲ್ಲಿ ಹಿಂದೆ ಉಳಿದರು. ಇದೇ ವೇಳೆ ಮ್ಯಾಗ್ನಸ್ ಕಾರ್ಲ್ಸೆನ್ ಉತ್ತಮ ಪ್ರದರ್ಶನ ನೀಡುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸುವಲ್ಲಿ ಯಶಸ್ವಿಯಾದರು.
ಮ್ಯಾಗ್ನಸ್ ಕಾರ್ಲ್ಸೆನ್ ಅವರು 17.5 ಪಾಯಿಂಟ್ಸ್ ಪಡೆಯುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದರೆ, ಹಿಕಾರು ನಕಮುರಾ ಅವರು 15.5 ಪಾಯಿಂಟ್ಸ್ ಗಳಿಸುವ ಮೂಲಕ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಆರ್. ಪ್ರಜ್ಞಾನಂದ ಅವರು 14.5 ಪಾಯಿಂಟ್ಸ್ ಪಡೆಯುವ ಮೂಲಕ ತೃತೀಯ ಸ್ಥಾನ ಗಳಿಸಿದ್ದಾರೆ.