ನ್ಯೂಯಾರ್ಕ್, ಜೂ. 09(DaijiworldNews/AA): ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಇಂದು ನ್ಯೂಯಾರ್ಕ್ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು, ಇಡೀ ವಿಶ್ವವೇ ಈ ಪಂದ್ಯಕ್ಕಾಗಿ ಕಾತುರದಿಂದ ಕಾಯುತ್ತಿದೆ.
ಇಂದು ನಡೆಯುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಹಾಗೂ ಪಾಕ್ ನಡುವೆ ರೋಚಕ ಹಣಾಹಣಿ ನಡೆಯಲಿದ್ದು, ಈ ಪಂದ್ಯಕ್ಕೆ ನಸ್ಸೌ ಕೌಂಟಿ ಸ್ಟೇಡಿಯಂ ಸಾಕ್ಷಿಯಾಗಲಿದೆ. ಭಾರತ ಹಾಗೂ ಪಾಕ್ ನಡುವಿನ ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಪ್ರಾರಂಭವಾಗಲಿದೆ.
ಐಸಿಸಿ ಪಾಲಿಗೆ ಚಿನ್ನದ ಮೊಟ್ಟೆಯಾಗಿರುವ ಇಂಡೋ ಪಾಕ್ ಪಂದ್ಯದ ವೇಳೆ ಪ್ರಸಾರಗೊಳ್ಳುವ ಜಾಹೀರಾತಿನ ಬೆಲೆಯೂ ಭಾರೀ ಏರಿಕೆ ಕಂಡಿದೆ. ಪ್ರತಿ ಸೆಕೆಂಡ್ ಜಾಹೀರಾತಿಗೆ 4 ಲಕ್ಷ ರೂ. ನಿಗದಿಪಡಿಸಲಾಗಿದೆ. ವಿಶ್ವಕಪ್ನ ಇತರೇ ಪಂದ್ಯಗಳಲ್ಲಿ ಪ್ರತಿ 10 ಸೆಕೆಂಡಿನ ಜಾಹೀರಾತಿಗೆ 6 ಲಕ್ಷ ರೂ. ಇದ್ದರೆ, ಭಾರತ ಮತ್ತು ಪಾಕ್ ಪಂದ್ಯದ ವೇಳೆ 10 ಸೆಕೆಂಡ್ ಜಾಹೀರಾತಿಗೆ 40 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಸದ್ಯದ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಪಂದ್ಯ ನಡೆಯುವ ವೇಳೆ ನ್ಯೂಯಾರ್ಕ್ನಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಶೇ.67 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದ್ದು, 6 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಳೆಯಿಂದ ಪಂದ್ಯ ರದ್ದಾರೆ ಭಾರತ ಹಾಗೂ ಪಾಕ್ ತಂಡಗಳಿಗೆ ತಲಾ 1 ಅಂಕ ನೀಡಲಾಗುತ್ತದೆ.