ಇಸ್ಲಾಮಾಬಾದ್, ಜೂ. 10(DaijiworldNews/AA): ಭಾರತ ವಿರುದ್ಧದ ಈ ಪಂದ್ಯದಲ್ಲಿ ತಂಡದ ಆಲ್ರೌಂಡರ್ ಇಮಾದ್ ವಾಸಿಂ ಕಾರಣ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸಲೀಂ ಮಲಿಕ್ ಬೇಸರ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ತಂಡದ ಸೋಲಿಗೆ ಪಾಕ್ ನ ಮಾಜಿ ನಾಯಕರು ತಮ್ಮದೆ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಈ ಬಗ್ಗೆ ಮಾಜಿ ನಾಯಕ ಸಲೀಂ ಮಲಿಕ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಇಮಾದ್ ವಾಸಿಂ ಉದ್ದೇಶಪೂರ್ವಕವಾಗಿ ಚೆಂಡುಗಳನ್ನು ವ್ಯರ್ಥ ಮಾಡಿದ್ದಾರೆ. ರನ್ ಗಳಿಸುವ ಬದಲು ಅವರು ಚೆಂಡುಗಳನ್ನು ವ್ಯರ್ಥ ಮಾಡುತ್ತಾ ಸುಲಭವಾಗಿ ಗುರಿ ಬೆನ್ನಟ್ಟುವುದನ್ನು ಕಷ್ಟಕರವಾಗಿಸಿದರು ಎಂದು ಆರೋಪ ಮಾಡಿದ್ದಾರೆ.
ಮತ್ತೊಬ್ಬ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪಾಕಿಸ್ತಾನ ತಂಡದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ. ಕೆಲ ಆಟಗಾರರು ನಾಯಕ ಬಾಬರ್ ಆಝಂ ವಿರುದ್ಧ ದೂರುಗಳನ್ನು ಹೊಂದಿದ್ದಾರೆ. ಒಬ್ಬ ನಾಯಕ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕು. ಒಬ್ಬ ನಾಯಕ ತಂಡವನ್ನು ಹಾಳುಮಾಡಬಹುದು ಅಥವಾ ತಂಡವನ್ನು ಉತ್ತಮಗೊಳಿಸಬಹುದು. ವಿಶ್ವಕಪ್ ಮುಗಿಯಲಿ, ನಂತರ ನಾನು ಮುಕ್ತವಾಗಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಶೋಯೇಬ್ ಅಖ್ತರ್ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ನಿಮಗೆ ನಿರಾಶೆ ಮತ್ತು ನೋವಾದಾಗ ಪೋಸ್ಟ್ ಮಾಡುವುದು ಸಹಜ. ಇಡೀ ದೇಶಕ್ಕೆ ಈ ಸೋಲಿನಿಂದ ನಿರಾಶೆ ಉಂಟಾಗಿದೆ. ನೈತಿಕತೆ ಕಡಿಮೆಯಾಗಿದೆ. ಹೇಗಾದರೂ ಮಾಡಿ ಗೆಲ್ಲುವ ಇಂಗಿತವನ್ನು ತೋರಿಸಬೇಕು. ಪಾಕಿಸ್ತಾನಕ್ಕೆ ಸೂಪರ್ ಎಂಟಕ್ಕೆ ಬರುವ ಅರ್ಹತೆ ಇದೆಯೇ? ಆ ದೇವರೇ ಬಲ್ಲ. ಎಂದು ತಿಳಿಸಿದ್ದಾರೆ.
ನಿನ್ನೆ ಸಂಜೆ ನ್ಯೂಯಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ 120 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ 20 ಓವರ್ಗಳಲ್ಲಿ 7 ವಿಕೆಟ್ಗೆ 113 ರನ್ ಗಳಿಸುವ ಮೂಲಕ ಸೋಲನ್ನಪ್ಪಿತ್ತು.