ಇಸ್ಲಾಮಾಬಾದ್, ಜೂ. 14(DaijiworldNews/AA): ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಅಮೆರಿಕ ಮತ್ತು ಭಾರತದ ವಿರುದ್ಧ ಪಾಕ್ ತಂಡವು ಕಳಪೆ ಪ್ರದರ್ಶನ ನೀಡಿ ಹೀನಾಯ ಸೋಲನ್ನು ಕಂಡಿತ್ತು. ಹೀಗಾಗಿ ಬಾಬರ್ ತಂಡದ ವಿರುದ್ಧ ಪಾಕ್ನಲ್ಲಿ ದೇಶದ್ರೋಹದ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಕಳೆದೊಂದು ವರ್ಷದಿಂದ ಪಾಕಿಸ್ತಾನ ತಂಡಕ್ಕೆ ಒಂದಲ್ಲಾ ಒಂದು ಸಂಕಷ್ಟ ಎದುರಾಗುತ್ತಲೇ ಇದೆ. ಇದಕ್ಕೆ ಮುಖ್ಯ ಕಾರಣ ಪಾಕ್ ತಂಡದ ಅತ್ಯಂತ ಕಳಪೆ ಪ್ರದರ್ಶನವಾಗಿದೆ. ಕಳೆದ ವರ್ಷ ನಡೆದ ಏಷ್ಯಾಕಪ್ನಿಂದ ಪ್ರಾರಂಭವಾದ ಪಾಕ್ ಕಳಪೆ ಪ್ರದರ್ಶನ ಈ ಬಾರಿಯ ಟಿ20 ವಿಶ್ವಕಪ್ವರೆಗೂ ಮುಂದುವರೆದಿದೆ. ಈ ಹಿನ್ನಲೆ ಪಾಕ್ ತಂಡಕ್ಕೆ ಹೊಸ ಸಂಕಷ್ಟವೊಂದು ಎದುರಾಗಿದೆ.
ಈ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಪಾಕ್ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿ ಪಾಕ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಆಡಿದ ಮೊದಲ 2 ಪಂದ್ಯಗಳಲ್ಲೂ ಪಾಕ್ ತಂಡ ಸೋಲನ್ನು ಕಂಡಿದ್ದು, ಇದೀಗ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳುವ ಹಂತ ತಲುಪಿದೆ.
ಕ್ರಿಕೆಟ್ ಶಿಶು ಅಮೆರಿಕ ಹಾಗೂ ಭಾರತ ತಂಡದ ವಿರುದ್ಧ ಪಾಕ್ ತಂಡದ ಸೋಲು ತಂಡಕ್ಕೆ ಹಾಗೂ ಅದರ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ಹೀಗಾಗಿ ತಂಡದ ವಿರುದ್ಧ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಕಿಡಿಕಾರಿದ್ದರು. ಇದೀಗ ಬಾಬರ್ ತಂಡದ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದ್ದು, ಇಡೀ ತಂಡ ಜೈಲು ಸೇರುವ ಸಾಧ್ಯತೆ ಇದೆ.
ಪಾಕ್ನ ವಕೀಲರೊಬ್ಬರು ಕೋಚ್ ಹಾಗೂ ಇತರ ಸಿಬ್ಬಂದಿ ಸೇರಿದಂತೆ ಎಲ್ಲಾ ಆಟಗಾರರ ವಿರುದ್ಧ ಕಳಪೆ ಪ್ರದರ್ಶನ ನೀಡಿರುವುದರಿಂದ ದೇಶದ್ರೋಹದ ಪ್ರಕರಣವನ್ನು ದಾಖಲಿಸಿದ್ದಾರೆ. ಇಡೀ ತಂಡ ದೇಶಕ್ಕೆ ದ್ರೋಹ ಬಗೆದಿದೆ ಎಂದು ಅವರು ಆರೋಪ ಮಾಡಿದ್ದಾರೆ.