ಆ್ಯಂಟಿಗುವಾ, ಜೂ.22(DaijiworldNews/AA): ಬಾಂಗ್ಲಾದೇಶ ವಿರುದ್ಧ ಇಂದು ನಡೆಯುವ ಸೂಪರ್-8 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಮಹತ್ತರ ಬದಲಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕಳೆದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಬದಲಿಗೆ ಕುಲ್ದೀಪ್ಗೆ ಚಾನ್ಸ್ ನೀಡಲಾಗಿತ್ತು. ಅದರಂತೆ ಈ ಬಾರಿಯ ಬಾಂಗ್ಲಾ ವಿರುದ್ಧದ ಪಂದ್ಯಕ್ಕೆ ಯುವ ಆಲ್ರೌಂಡರ್ ಶಿವಂ ದುಬೆ ಅವರ ಬದಲಿಗೆ ಹೊಡಿ-ಬಡಿ ಆಟಕ್ಕೆ ಹೆಸರುವಾಸಿಯಾಗಿರುವ ಸಂಜು ಸ್ಯಾಮ್ಸನ್ ಅಥವಾ ಯಶಸ್ವಿ ಜೈಸ್ವಾಲ್ ಅವರಿಗೆ ಚಾನ್ಸ್ ನೀಡುವುದು ಬಹುತೇಖ ಖಚಿತ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಬಾರಿಯ ಐಪಿಎಲ್ನಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದ ದುಬೆ, ಟಿ-20 ವಿಶ್ವಕಪ್ನಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ. ಹೀಗಾಗಿ ಸೆಮಿಫೈನಲ್ ತಲುಪಲು ಇಂದು ನಡೆಯುವ ಪಂದ್ಯ ನಿರ್ಣಾಯಕವಾಗಿರುವುದರಿಂದ ದುಬೆ ಅವರನ್ನು ಕೈ ಬಿಡುವ ಸಾಧ್ಯತೆ ಇದೆ. ಇನ್ನು ದುಬೆ ಬದಲಿದೆ ವೆಸ್ಟ್ ಇಂಡೀಸ್ ನಂತಹ ಪಿಚ್ಗಳಲ್ಲಿ ಆಡಿ ಅನುಭವ ಹೊಂದಿರುವ ಸಂಜು ಸ್ಯಾಮ್ಸನ್ಗೆ ಇಂದಿನ ಪಂದ್ಯದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಇಂದಿನ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧದ ಸೂಪರ್-8 ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ವೇಗಿ ಮೊಹಮ್ಮದ್ ಸಿರಾಜ್ ತಂಡಕ್ಕೆ ಮರಳಬಹುದು. ಜೊತೆಗೆ ವೇಗವಾಗಿ ರನ್ ಗಳಿಸುವ ದೃಷ್ಟಿಯಿಂದ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ ಅವರು ರೋಹಿತ್ ಶರ್ಮಾ ಜೊತೆಗೆ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಆ ಮೂಲಕ ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಲಿದ್ದು, ಟೂರ್ನಿಯಲ್ಲಿ ಬ್ಯಾಟ್ ಅಲ್ಲದೆ ಬೌಲಿಂಗ್ನಲ್ಲೂ ಎಡವಿರುವ ರವೀಂದ್ರ ಜಡೇಜಾ ಅವರ ಬದಲಿಗೆ ಜೈಸ್ವಾಲ್ಗೆ ಸ್ಥಾನ ಸಿಗುವ ಸಾಧ್ಯತೆಯಿದೆ.