ಚೆನ್ನೈ, ಮೇ 14 (Daijiworld News/SM):ರೋಚಕವಾಗಿದ್ದ ಐಪಿಎಲ್ ನ ಫೈನಲ್ ಪಂದ್ಯ ಸೋತ ಬಳಿಕ ಚೆನ್ನೈ ತಂಡದ ವಿರುದ್ಧ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಹಿರಿಯ ಅನುಭವಿ ಆಟಗಾರರ ಹೊರತಾಗಿಯೂ ತಂಡ ೧ ರನ್ ಸೋಲು ಕಂಡಿರುವುದು ಅಚ್ಚರಿಯ ವಿಚಾರ. ಈ ಹಿನ್ನೆಲೆ ಮುಂದಿನ ಆವೃತ್ತಿಗೆ ತಂಡದಲ್ಲಿ ಒಂದಿಷ್ಟು ಬದಲಾವಣೆಗಳಾಗಬಹುದು ಎನ್ನಲಾಗಿದೆ.
ಬಹುತೇಕ ಹಿರಿಯ ಆಟಗಾರರನ್ನೇ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ಐಪಿಎಲ್ ಆವೃತ್ತಿಗೆ ಬದಲಾವಣೆ ಮಾಡುವ ಸೂಚನೆ ನೀಡಿದೆ. ತಂಡದ ಮುಖ್ಯ ತರಬೇತುದಾರರಾಗಿರುವ ಸ್ಟೀಫನ್ ಫ್ಲೆಮಿಂಗ್ ತಂಡಕ್ಕೆ ಯುವ ಆಟಗಾರರನ್ನು ಆಯ್ಕೆ ಮಾಡುವ ಬಗ್ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
2019ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಸೋಲುಂಡ ಬಳಿಕ ಮಾತನಾಡಿದ್ದ ಫ್ಲೆಮಿಂಗ್, ನಮ್ಮ ತಂಡದಲ್ಲಿ ಹಿರಿಯ ಆಟಗಾರರೇ ಇದ್ದಾರೆ. ಈ ಕಾರಣದಿಂದಲೇ 2018ರಲ್ಲಿ ನಾವು ಚಾಂಪಿಯನ್ ಆಗಿದ್ದೆವು. ಈ ವರ್ಷವೂ ಕೂಡ ಫೈನಲ್ ತಲುಪಿದ್ದೇವೆ. ಇದು ನೆಮ್ಮದಿಯನ್ನು ತಂದಿದೆ ಎಂದರು. ಆದರೆ ಮುಂದಿನ ದಿನಗಳಲ್ಲಿ ತಂಡವನ್ನು ಮರು ನಿರ್ಮಾಣ ಮಾಡುವ ಅಗತ್ಯವಿದೆ ಎನ್ನುವ ಮೂಲಕ ತಂಡಕ್ಕೆ ಯುವ ಆಟಗಾರರನ್ನೇ ಆಯ್ಕೆ ಮಾಡುವ ಸುಳಿವನ್ನು ಅವರು ನೀಡಿದ್ದಾರೆ.
ಈ ವರ್ಷದ ಐಪಿಎಲ್ ನಲ್ಲಿ ಚೆನ್ನೈ ತಂಡದ ಬೌಲಿಂಗ್ ವಿಭಾಗ ಬಲಿಷ್ಟವಾಗಿತ್ತು. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ಒಂದಿಷ್ಟು ಸಮಸ್ಯೆ ಕಂಡು ಬಂದಿದೆ. ಮುಂದಿನ ಆವೃತ್ತಿಗೆ ಬೇರೆ ತಂಡಗಳಂತೆ ಯುವ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಿದ್ದೇವೆ ಎಂದುವುದಾಗಿ ಫ್ಲೆಮಿಂಗ್ ತಿಳಿಸಿದ್ದಾರೆ.