ಬಾರ್ಬಡೋಸ್, ಜೂ.29(DaijiworldNews/AA): ಟಿ20 ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಫೈನಲ್ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳಾದ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿದೆ.
ಇಂದು ರಾತ್ರಿ 8 ಗಂಟೆಗೆ ಬ್ರಿಡ್ಜ್ಟೌನ್ನ ಕೆನ್ಸಿಲ್ಟೌನ್ ಓವೆಲ್ನಲ್ಲಿ ನಡೆಯಲಿರುವ ಫೈನಲ್ ಪಂದ್ಯ ನಡೆಯಲಿದೆ. ಈ ಬಾರಿ ಒಂದೇ ಒಂದು ಪಂದ್ಯದಲ್ಲಿ ಸೋಲದೇ ನೇರವಾಗಿ ಫೈನಲ್ ತಲುಪಿದ್ದ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ ಎದುರಿಸಬೇಕಿದೆ.
11 ವರ್ಷಗಳ ಹಿಂದೆ ಫೈನಲ್ನಲ್ಲಿ ಎಡವಿದ್ದ ಭಾರತ ತಂಡ ಇದೀಗ ಫೈನಲ್ ತಲುಪಿದ್ದು, ಈ ಬಾರಿಯ ಟ್ರೋಫಿ ಮುಡಿಗೇರಿಸಿಕೊಳ್ಳುವ ನೀರಿಕ್ಷೆಯಲ್ಲಿದೆ. ದಕ್ಷಿಣ ಆಫ್ರಿಕಾ ತಂಡದಲ್ಲಿ ಹೊಡಿಬಡಿ ಆಟಗಾರರೇ ಇರುವುದರಿಂದ ಸ್ವಲ್ಪ ಯಾಮಾರಿದರೂ ಭಾರತಕ್ಕೆ ಮತ್ತೆ ವನವಾಸ ತಪ್ಪಿದ್ದಲ್ಲ. ಈ ಬಾರಿಯ ವಿಶ್ವಕಪ್ ಅನ್ನು ತನ್ನದಾಗಿಸಿಕೊಳ್ಳಲು ಎರಡೂ ತಂಡಗಳು ಭರದ ಸಿದ್ಧತೆ ನಡೆಸಿವೆ.
ಆದರೆ ಈ ಬಾರಿ ವಿರಾಟ್ ಕೊಹ್ಲಿ ಅವರು ಉತ್ತಮ ರನ್ ಸಿಡಿಸಲು ವಿಫಲರಾಗಿದ್ದಾರೆ. ಇಂದು ನಡೆಯುವ ಪಂದ್ಯದಲ್ಲಿಯೂ ಕೊಹ್ಲಿ ರನ್ ಸಿಡಿಸದೇ ಇದ್ದರೇ ಇದು ಟೀಂ ಇಂಡಿಯಾದ ಮೇಲೆ ಪರಿಣಾಮ ಬೀರಲಿದೆ. ತಂಡದ ನಾಯಕ ರೋಹಿತ್ ಶರ್ಮಾ ಅವರು ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇಂದಿನ ಫೈನಲ್ ಪಂದ್ಯದಲ್ಲಿಯೂ ರನ್ ಸಿಡಿಸುವ ತವಕದಲ್ಲಿದ್ದಾರೆ. ಇನ್ನು ಇತ್ತ, ಸ್ಫೋಟಕ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಪಾಂಡ್ಯ, ಶಿವಂ ದುಬೆ ಅವರು ತಂಡಕ್ಕೆ ನೆರವಾಗುತ್ತಿದ್ದಾರೆ. ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಅರ್ಷದೀಪ್ಸಿಂಗ್, ಬೂಮ್ರಾ ಎದುರಾಳಿಗಳ ನಿದ್ದೆಗೆಡಿಸಿದ್ದಾರೆ.