ಹರಾರೆ, ಜು. 08(DaijiworldNews/AA): ಜಿಂಬಾಬ್ವೆ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಪಂಜಾಬ್ ಮೂಲದ ಅಭಿಷೇಕ್ ಶರ್ಮಾ ಸ್ಫೋಟಕ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಅಭಿಷೇಕ್ ಅವರ ಪ್ರದರ್ಶನಕ್ಕೆ ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಮೊದಲ 33 ಎಸೆತಗಳಲ್ಲಿ 50 ರನ್ ಬಾರಿಸಿದ್ದ, ಮುಂದಿನ 13 ಎಸೆತಗಳಲ್ಲಿ 50 ರನ್ ಪೂರೈಸುವುದರೊಂದಿಗೆ ಶತಕ ಸಿಡಿಸಿ ಔಟಾದರು. ಈ 46 ಎಸೆತಗಳಲ್ಲಿ 8 ಸಿಕ್ಸರ್, 7 ಬೌಂಡರಿಗಳೂ ಸೇರಿವೆ. ಇನ್ನು ಅಭಿಷೇಕ್ ಅವರ ಶತಕದ ನೆರವಿನಿಂದ ಟೀಂ ಇಂಡಿಯಾ ಜಿಂಬಾಬ್ವೆಗೆ 234 ರನ್ಗಳ ಗುರಿಯನ್ನು ನೀಡಿತ್ತು. ಆದರೆ ಈ ಗುರಿಯನ್ನು ಬೆನ್ನತ್ತಿದ ಜಿಂಬಾಬ್ವೆ ಕೇವಲ 134 ರನ್ಗಳಿಗೆ ಆಲೌಟ್ ಆಗಿ 100 ರನ್ಗಳ ಹೀನಾಯ ಸೋಲು ಕಂಡಿತ್ತು.
ಜಿಂಬಾಬ್ವೆ ವಿರುದ್ಧದ ಗೆಲುವಿನ ಬಳಿಕ ಅಭಿಷೇಕ್ ಶರ್ಮಾ ತಮ್ಮ ಪೋಷಕರಿಗೆ ವಿಡಿಯೋ ಕಾಲ್ ಮಾಡಿದ್ದರು. ಇದಾದ ಬಳಿಕ ಅಭಿಷೇಕ್ ತನ್ನ ಕ್ರಿಕೆಟ್ ಗುರು ಯುವರಾಜ್ ಸಿಂಗ್ ಗೆ ಕರೆ ಮಾಡಿದ್ದಾರೆ. ಈ ವೇಳೆ ಯುವರಾಜ್ ಸಿಂಗ್ ಅವರು, ಇದು ಆರಂಭವಷ್ಟೇ, ನಿನ್ನಿಂದ ಇನಷ್ಟು ನಿರೀಕ್ಷಿಸುತ್ತಿದ್ದೇನೆ ಎಂದು ಅಭಿಷೇಕ್ ಶರ್ಮಾ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗುರುವಿನ ಮೆಚ್ಚುಗೆಗೆ ಅಭಿಷೇಕ್ ಧನ್ಯವಾದ ತಿಳಿಸಿದ್ದಾರೆ. ಇದೀಗ ಈ ವಿಡಿಯೋವು ಬಿಸಿಸಿಐ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.