ನವದೆಹಲಿ, ಜು. 09(DaijiworldNews/AA): ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾರತದ ಧ್ವಜಕ್ಕೆ ಅಗೌರವ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿ20 ವಿಶ್ವಕಪ್ ಗೆದ್ದ ಬಳಿಕ ಹಿಟ್ ಮ್ಯಾನ್ ಭಾರತ ಧ್ವಜವನ್ನ ಹಿಡಿದು ಸಂಭ್ರಮಿಸಿದ್ದರು. ಇದೇ ವೇಳೆ ಅವರು ಧ್ವಜವನ್ನು ನೆಡಲು ಪ್ರಯತ್ನಿಸಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಅದೇ ಫೋಟೋವನ್ನು ರೋಹಿತ್ ಶರ್ಮಾ ತಮ್ಮ ಎಕ್ಸ್ ಖಾತೆಯ ಪ್ರೊಫೈಲ್ ಪಿಕ್ಚರ್ ಆಗಿ ಬಳಸಿಕೊಂಡಿದ್ದಾರೆ.
ರೋಹಿತ್ ಶರ್ಮಾ ಅವರು ಈ ಫೋಟೋವನ್ನು ಎಕ್ಸ್ ಖಾತೆಯ ಪ್ರೊಫೈಲ್ ಪಿಕ್ಚರ್ ಆಗಿ ಬಳಸಿಕೊಂಡ ಬೆನ್ನಲ್ಲೇ ವಿವಾದ ಪ್ರಾರಂಭವಾಗಿದೆ. ಜೊತೆಗೆ ಅವರ ವಿರುದ್ಧ ಸಾಕಷ್ಟು ಮಂದಿ ಆಕ್ರೋಶ ಹೊರಹಾಕುತ್ತಿದ್ದಾರೆ.
ರೋಹಿತ್ ಶರ್ಮಾ ಅವರು ಬಳಸಿದ ಪ್ರೊಫೈಲ್ ಪಿಕ್ಚರ್ ನಲ್ಲಿ ಭಾರತದ ಧ್ವಜವು ನೆಲವನ್ನು ಸ್ಪರ್ಶಿಸುತ್ತಿದ್ದು, ಇದು ಭಾರತಕ್ಕೆ ಮಾಡಿದ ಅವಮಾನವಾಗಿದೆ. 1971ರ ರಾಷ್ಟ್ರೀಯ ಗೌರವ ಅವಮಾನಗಳ ತಡೆ ಕಾಯ್ದೆಯ ಅನುಸಾರ, ಧ್ವಜವನ್ನು ಉದ್ದೇಶಪೂರ್ವಕವಾಗಿ ನೆಲ ಅಥವಾ ನೀರಿನಲ್ಲಿ ಸ್ಪರ್ಶಿಸುವಂತೆ ಬಳಸುವಂತಿಲ್ಲ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಭಾರತದ ಧ್ವಜವು ನೆಲವನ್ನು ಮುಟ್ಟಬಾರದು ಎಂಬುದು ಸರಳ ಕಾನೂನು! ಇದು ಕೂಡ ಭಾರತೀಯ ನಾಯಕ ರೋಹಿತ್ ಶರ್ಮಾ ಅವರಿಗೆ ತಿಳಿದಿಲ್ಲವೇ ಎಂದು ಮತ್ತೊಬ್ಬರು ಪ್ರಶ್ನಿಸಿದರೆ, ಇನ್ನೊಬ್ಬರು ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ರೋಹಿತ್ ಶರ್ಮಾ ಎಚ್ಚರವಹಿಸಬೇಕೆಂದು ತಿಳಿಸಿದ್ದಾರೆ. ಜೊತೆಗೆ ಕೂಡಲೇ ತಮ್ಮ ಪ್ರೊಫೈಲ್ ಪಿಕ್ಚರ್ ನಿಂದ ಆ ಫೋಟೋವನ್ನು ತೆಗೆದು ಹಾಕುವಂತೆ ಕೆಲವರು ಸೂಚಿಸಿದ್ದಾರೆ.