ಮುಂಬಯಿ, ಜು. 12(DaijiworldNews/AA): ಟೀಮ್ ಇಂಡಿಯಾದ ಪ್ರಧಾನ ಕೋಚ್ ಆಯ್ಕೆ ಈಗಾಗಲೇ ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಈ ಹುದ್ದೆಗೆ ನೇಮಕಗೊಂಡಿದ್ದಾರೆ. ಇನ್ನುಳಿದ ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್ ಮತ್ತು ಸಹಾಯಕ ಕೋಚ್ ಗಳ ಆಯ್ಕೆಯಾಗಬೇಕಿದ್ದು, ಇದೀಗ ಬೌಲಿಂಗ್ ಕೋಚ್ ರೇಸ್ ನಿಂದ ಕನ್ನಡಿಗ ವಿನಯ್ ಕುಮಾರ್ ಹೊರಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ದಾವಣಗೆರೆ ಎಕ್ಸ್ಪ್ರೆಸ್ ಎಂದೇ ಪ್ರಸಿದ್ಧವಾಗಿರುವ ವಿನಯ್ ಕುಮಾರ್ ಅವರನ್ನು ಬಿಸಿಸಿಐ ಬೌಲಿಂಗ್ ಕೋಚ್ ರೇಸ್ ನಿಂದ ಕೈಬಿಟ್ಟಿದೆ. ಜಹೀರ್ ಖಾನ್ ಮತ್ತು ಲಕ್ಷ್ಮೀಪತಿ ಬಾಲಾಜಿ ಹೆಸರನ್ನು ಮಾತ್ರ ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗಿದೆ.
ವಿನಯ್ ಕುಮಾರ್ ಅವರನ್ನು ಆಯ್ಕೆ ಮಾಡುವುವ ಬದಲು ಅನುಭವಿ ಮಾಜಿ ಕ್ರಿಕೆಟಿಗರಾದ ಜಹೀರ್ ಖಾನ್ ಇಲ್ಲವೇ ಲಕ್ಷ್ಮಿಪತಿ ಬಾಲಾಜಿ ಅವರನ್ನು ಆಯ್ಕೆಗೆ ಪರಿಗಣಿಸುವಂತೆ ಬಿಸಿಸಿಐ, ಗಂಭೀರ್ಗೆ ಸಲಗೆ ನೀಡಿದೆ ಎಂದು ವರದಿಯಾಗಿದೆ.
ಅತ್ಯಂತ ಯಶಸ್ವಿ ಎಡಗೈ ವೇಗದ ಬೌಲರ್ ಎನಿಸಿಕೊಂಡಿರುವ ಜಹೀರ್ ಖಾನ್, ಭಾರತ ಪರ 309 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 610 ವಿಕೆಟ್ ಉರುಳಿಸಿದ್ದರು. ಬಿಸಿಸಿಐ ಮೂಲಗಳ ಪ್ರಕಾರ, ಜಹೀರ್ ಖಾನ್, ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗುವ ಸಾಧ್ಯತೆ ಇದೆ. ಇವರು ಈ ಹುದ್ದೆಗೆ ಒಪ್ಪದೇ ಇದ್ದರೆ ತಮಿಳುನಾಡು ಮೂಲದ ಲಕ್ಷ್ಮಿಪತಿ ಬಾಲಾಜಿ ಅವರು ಕೋಚ್ ಆಗಲಿದ್ದಾರೆ ಎನ್ನಲಾಗುತ್ತಿದೆ.
ಐಪಿಎಲ್ ನಲ್ಲಿ ಬಾಲಾಜಿ ಅವರಿಗೆ ಹಲವು ತಂಡಗಳ ಬೌಲಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಿರುವ ಅನುಭವವಿದೆ. ಮೂಲಗಳ ಪ್ರಕಾರ ಜಹೀರ್ ಖಾನ್ ಅವರೇ ಬೌಲಿಂಗ್ ಕೋಚ್ ಆಗಲಿದ್ದು ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ಬ್ಯಾಟಿಂಗ್ ಕೋಚ್ ಆಗಿ ಅಭಿಷೇಕ್ ನಾಯರ್ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.