ಬೆಂಗಳೂರು, ಜು. 15(DaijiworldNews/AK): 2024ರ ಟಿ20 ವಿಶ್ವಕಪ್ ಗೆಲುವಿಗೆ ಕಾರಣರಾದ ಟೀಂ ಇಂಡಿಯಾದ ನಿರ್ಗಮಿತ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಸದನದಲ್ಲಿ ಅಭಿನಂದನಾ ಗೌರವ ಸಲ್ಲಿಸಲು ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಬಿಜೆಪಿ ಶಾಸಕ ಸುರೇಶ್ ಕುಮಾರ್, ಭಾರತ ಟಿ20 ವಿಶ್ವಕಪ್ ಗೆಲುವಿನ ವೇಳೆ ಟೀಂ ಇಂಡಿಯಾದ ಮುಖ್ಯಕೋಚ್ ಆಗಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ಸನ್ಮಾನಿಸುವಂತೆ ಮನವಿ ಮಾಡಿದರು.
ಈ ಮನವಿಯನ್ನು ಸದನದ ಎಲ್ಲಾ ಸದಸ್ಯರು ಸ್ವಾಗತಿಸಿದರು. ಬಳಿಕ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್ ಕರ್ನಾಟಕದ ಜನತೆ ಪರವಾಗಿ ದ್ರಾವಿಡ್ ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಕಳೆದ ಜೂ.29 ರಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ಗಳ ರೋಚಕ ಗೆಲುವು ಸಾಧಿಸಿ ಭಾರತ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು.