ಮುಂಬೈ, ಜು 15(DaijiworldNews/ AK): ಭಾರತ ಟಿ20 ತಂಡದ ನೂತನ ನಾಯಕನಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದಾರೆ. ಟಿ20 ವಿಶ್ವಕಪ್ ಗೆಲುವಿನ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಹೀಗಾಗಿ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಬಿಸಿಸಿಐ ಮುಂದಿತ್ತು.
ಅದರಂತೆ ಇದೀಗ ಭಾರತ ಟಿ20 ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯಗೆ ಪಟ್ಟ ನೀಡಲು ಆಯ್ಕೆ ಸಮಿತಿ ನಿರ್ಧಿರಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಇದರೊಂದಿಗೆ ಟೀಮ್ ಇಂಡಿಯಾ ಟಿ20 ತಂಡದ ಖಾಯಂ ನಾಯಕನಾಗಿ ಪಾಂಡ್ಯ ಕಾಣಿಸಿಕೊಳ್ಳುವುದು ನಿಶ್ಚಿತವಾಗಿದೆ.
ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಜೊತೆ ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್, ಸೂರ್ಯಕುಮಾರ್ ಹೆಸರುಗಳು ನಾಯಕತ್ವದ ರೇಸ್ನಲ್ಲಿ ಕೇಳಿ ಬಂದಿತ್ತು. ಇದೀಗ ಹಾರ್ದಿಕ್ ಪಾಂಡ್ಯರನ್ನೇ ಮುಂದುವರೆಸಲು ಆಯ್ಕೆ ಸಮಿತಿ ನಿರ್ಧರಿಸಿದ್ದು, ಅದರಂತೆ ಮುಂಬರುವ ಟಿ20 ಸರಣಿಗಳಲ್ಲಿ ಭಾರತ ಟಿ20 ತಂಡವನ್ನು ಪಾಂಡ್ಯ ಮುನ್ನಡೆಸಲಿದ್ದಾರೆ.
ಜುಲೈ 27 ರಿಂದ ಶುರುವಾಗಲಿರುವ ಟಿ20 ಸರಣಿಯೊಂದಿಗೆ ಹಾರ್ದಿಕ್ ಪಾಂಡ್ಯ ಪೂರ್ಣ ಪ್ರಮಾಣದ ನಾಯಕರಾಗಿ ಪಾದರ್ಪಣೆ ಮಾಡಲಿದ್ದಾರೆ. ಇದಾಗ್ಯೂ ಏಕದಿನ ಮತ್ತು ಟೆಸ್ಟ್ ತಂಡದ ನಾಯಕರಾಗಿ ಮುಂದಿನ ವರ್ಷದವರೆಗೆ ರೋಹಿತ್ ಶರ್ಮಾ ಮುಂದುವರೆಯಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.