ಹೊಸದಿಲ್ಲಿ, ಮೇ 16 (Daijiworld News/SM): ವಿಶ್ವಕ್ಕೆ ಸ್ಪೋಟಕ ಬ್ಯಾಟಿಂಗ್ ಪರಿಚಯಿಸಿದ ಜಮೈಕನ್ ದೈತ್ಯ ಕ್ರಿಸ್ ಗೇಲ್ ತಮ್ಮ 39ರ ಹರೆಯದಲ್ಲೂ ಫಿಟ್ ನೆಸ್ ಬಗ್ಗೆ ಕಾಳಜಿ ಹೊಂದಿದ್ದಾರೆ.
ಈ ತಿಂಗಳಂತ್ಯಕ್ಕೆ ಆರಂಭವಾಗಲಿರುವ ವಿಶ್ವಕಪ್ ಅವರ ಪಾಲಿಗೆ ಐದನೇ ಹಾಗೂ ಕೊನೆಯ ವಿಶ್ವಕಪ್ ಆಗಲಿದೆ. ಇದು ಕೊನೆಯ ವಿಶ್ವಕಪ್ ಆಗಿದ್ದರೂ ಕೂಡ ಅವರು ಫಿಟ್ನೆಸ್ ಬಗ್ಗೆ ಭಾರೀ ಕಾಳಜಿ ವಹಿಸುತ್ತಿದ್ದಾರೆ. ಇದಕ್ಕಾಗಿ ಅವರು ಜಿಮ್ಗೆ ತೆರಳುವುದಿಲ್ಲ. ಅದರ ಬದಲು ಕಳೆದೆರಡು ತಿಂಗಳಿಂದ ಯೋಗ ನಡೆಸಲು ಮುಂದಾಗಿದ್ದಾರೆ.
ಫಿಟ್ನೆಸ್ ಫಾರ್ಮುಲಾ ಕುರಿತು ಮಾತಾಡಿದ 'ಯುನಿವರ್ಸ್ ಬಾಸ್' ಖ್ಯಾತಿಯ ಕ್ರಿಸ್ ಗೇಲ್, 'ಯೋಗ ಮತ್ತು ಮಸಾಜ್ ಮಾಡುವುದರಿಂದ ಸಹಜ ಸಾಮರ್ಥ್ಯ ಲಭಿಸುತ್ತದೆ. ಇದರಿಂದ ದಿನವಿಡೀ ಅಂಗಳದಲ್ಲಿ ಕಳೆಯಲು ಸಾಧ್ಯವಾಗುತ್ತದೆ. ಹಾಗೆಯೇ ಸುದೀರ್ಘ ವಿಶ್ರಾಂತಿ ಕೂಡ ಲಭಿಸುತ್ತದೆ' ಎಂದರು.
'ವಯಸ್ಸು ಹೆಚ್ಚುತ್ತಲೇ ಹೋಗುತ್ತದೆ. ನಾವಿನ್ನು ಸಣ್ಣವರಾಗುವುದಿಲ್ಲ. ಆದರೆ ಮಾನಸಿಕವಾಗಿ ಗಟ್ಟಿಯಾಗಿರುವುದು ಮುಖ್ಯ. ಕಳೆದೆರಡು ತಿಂಗಳಿಂದ ನಾನು ಜಿಮ್ಗೆ ತೆರಳಿ ದೇಹ ದಂಡಿಸಿಕೊಂಡಿಲ್ಲ. ಇದರ ಬದಲು ಯೋಗ ನಡೆಸುತ್ತಿದ್ದೇನೆ ಎಂದು ಗೇಲ್ ಪ್ರತಿಕ್ರಿಯೆ ನೀಡಿದ್ದಾರೆ.