ಬೆಂಗಳೂರು, ಜು. 20(DaijiworldNews/AA): ಸೌತ್ ಕೊರಿಯಾದಲ್ಲಿ ನಡೆಯಲಿರುವ ಏಷ್ಯಾ ಫೆಸಿಫಿಕ್ ಟ್ರಯಲ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಲು ಕನ್ನಡತಿ ಅಶ್ವಿನಿ ಗಣಪತಿ ಭಟ್ ಆಯ್ಕೆಯಾಗಿದ್ದಾರೆ.
ಅಕ್ಟೋಬರ್ 23 ರಿಂದ 27 ರವರೆಗೆ ಸೌತ್ ಕೊರಿಯಾದ ಉಲ್ಜುನಲ್ಲಿ ನಡೆಯಲಿರುವ ಅಲ್ಟ್ರಾ ಮ್ಯಾರಥಾನ್ ಓಟದಲ್ಲಿ ಅಶ್ವಿನಿ ಭಾಗವಹಿಸಲಿದ್ದಾರೆ. ಮೂಲತಃ ಸಾಗರದವರಾದ ಅಶ್ವಿನಿ ಅವರು ಏಷ್ಯಾ ಫೆಸಿಫಿಕ್ ಟ್ರಯಲ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ರಾಜ್ಯದ ಏಕೈಕ ಕ್ರೀಡಾಪಟುವಾಗಿದ್ದಾರೆ.
ಬೆಂಗಳೂರಿನ ಅಲ್ಟ್ರಾ ಮ್ಯಾರಥಾನ್ ಓಟಗಾರ್ತಿಯಾಗಿ ಹಲವು ಸಾಧನೆ ಮಾಡಿರುವ ಅಶ್ವಿನಿ ಗಣಪತಿ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಟ್ರಯಲ್ ಮ್ಯಾರಥಾನ್ ಓಟದ ಸ್ಪರ್ಧೆಗಾಗಿ ಆಯ್ಕೆಯಾದವರ ಪಟ್ಟಿಯನ್ನು ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ಪ್ರಕಟಿಸಿದೆ. ಇದರಲ್ಲಿ ಭಾರತ ತಂಡವು ಒಟ್ಟು ೨ ವಿಭಾಗದಲ್ಲಿ ಸ್ಪರ್ಧಿಸಲಿದೆ.
80 ಕಿಮೀ ಉದ್ದದ ಟ್ರಯಲ್ ವಿಭಾಗದಲ್ಲಿ 3 ಪುರುಷರು ಮತ್ತು ಒಬ್ಬ ಮಹಿಳೆ ಅಂದರೆ ಅಶ್ವಿನಿ ಅವರು ಸ್ಪರ್ಧಿಸಲಿದ್ದಾರೆ. ಇನ್ನು 40 ಕಿಲೋಮೀಟರ್ಗಳ ಶಾರ್ಟ್ ಟ್ರಯಲ್ ವಿಭಾಗದಲ್ಲಿ 5 ಪುರುಷರು ಮತ್ತು ಒಬ್ಬ ಮಹಿಳೆ ಕಣಕ್ಕಿಳಿಯಲಿದ್ದಾರೆ.