ಹೊಸದಿಲ್ಲಿ, ಮೇ 17(Daijiworld News/SM): ವಿಶ್ವಕಪ್ ಪಂದ್ಯಗಳಲ್ಲಿ ಯಾವುದೇ ತಂಡದಲ್ಲಾಗಲಿ ಆಲ್ ರೌಂಡರ್ ಪಾತ್ರ ಪ್ರಮುಖವಾಗಲಿದ್ದು, ಅತ್ತ ಹೆಚ್ಚಿನ ಗಮನ ನೀಡಬೇಕೆಂದು ಮಾಜಿ ಆಲ್ ರೌಂಡರ್, 1983ರ ವಿಶ್ವಕಪ್ ಹೀರೋ ಮೊಹಿಂದರ್ ಅಮರ್ನಾಥ್ ಹೇಳಿದ್ದಾರೆ.
'ತಂಡವೊಂದರ ಯಶಸ್ಸಿನಲ್ಲಿ ಆಲ್ ರೌಂಡರ್ ನಿರ್ಣಾಯಕ ಪಾತ್ರ ಮಹತ್ವದ್ದಾಗಿರಲಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ಗಳೆರಡರಲ್ಲೂ ಆತ ಪರಿಣತನಾಗಿರಬೇಕು. ತಂಡಕ್ಕೆ ಹಿನ್ನಡೆ ಯಾದಾಗಲೆಲ್ಲ ಜವಾಬ್ದಾರಿಯುತ ಪ್ರದರ್ಶನ ನೀಡುವ ಕೌಶಲ ಆತನಲ್ಲಿರಬೇಕು' ಎಂದು ಮೊಹಿಂದರ್ ಹೇಳಿದ್ದಾರೆ.
'ಓರ್ವ ಆಟಗಾರ ತನ್ನ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಿದಾಗ ಆತನಿಂದ ಉತ್ತಮ ಆಟ ನಿರೀಕ್ಷಿಸಬಹುದು. ಆಟದಲ್ಲಿ ಏರುಪೇರು ಸಹಜ. ಇದನ್ನು ಅರ್ಥೈಸಿಕೊಳ್ಳು ಮನಃಸ್ಥಿತಿ ಹೊಂದಿದ್ದರಷ್ಟೇ ಯಶಸ್ಸು ಸಾಧ್ಯ' ಎಂದರು.
ಮೊಹಿಂದರ್ ಅಮರ್ನಾಥ್ ಭಾರತದ ಪರ 69 ಟೆಸ್ಟ್, 85 ಏಕದಿನ ಪಂದ್ಯಗಳನ್ನಾಡಿದ್ದಾರೆ. ಇತ್ತೀಚೆಗೆ 'ಸಿಯೆಟ್ ಜೀವಮಾನ ಶ್ರೇಷ್ಠ ಸಾಧಕ' ಪ್ರಶಸ್ತಿಗೆ ಭಾಜನರಾಗಿದ್ದಾರೆ.