ಪ್ಯಾರಿಸ್, ಜು.26(DaijiworldNews/AA): ಮಹತ್ವದ ಕ್ರೀಡಾಕೂಟವಾದ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಇಂದು ಅದ್ಧೂರಿ ಉದ್ಘಾಟನಾ ಸಮಾರಂಭದ ಮೂಲಕ ಅಧಿಕೃತ ಚಾಲನೆ ದೊರೆಯಲಿದೆ. ಇದೀಗ ಈ ಕ್ರೀಡಾಕೂಟಕ್ಕೆ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಭರ್ಜರಿ ತಯಾರಿ ನಡೆಸುತ್ತಿದ್ದು, ಸಮುದ್ರದ ಆಳದಲ್ಲಿ ಕಠಿಣ ಅಭ್ಯಾಸ ನಡೆಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೀರಜ್ ಚೋಪ್ರಾ ಅವರು ತಮ್ಮ ಅಧಿಕೃತ ಖಾತೆ ಎಕ್ಸ್ ನಲ್ಲಿ ನೀರಿನಾಳದಲ್ಲಿ ಸ್ಕೂಬಾ ಡೈವ್ ಉಡುಪು ತೊಟ್ಟು ಜಾವೆಲಿನ್ ಎಸೆಯುವಂತೆ ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ಸ್ವತಃ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು "ಆಕಾಶದಲ್ಲೇ ಆಗಲಿ, ನೆಲದ ಮೇಲಾಗಲಿ, ಅಥವಾ ನೀರಿನಾಳದಲ್ಲೇ ಆಗಲಿ! ನಾನು ಯಾವಾಗಲೂ ಜಾವೆಲಿನ್ ಬಗ್ಗೆಯೇ ಯೋಚಿಸುತ್ತಿರುವೆ. ತರಬೇತಿ ಶುರುವಾಗಿದೆ" ಎಂಬ ಅಡಿಬರಹದೊಂದಿಗೆ ಹಂಚಿಕೊಂಡಿದ್ದಾರೆ.
ನೀರಜ್ ಚೋಪ್ರಾ ಇದುವರೆಗಿನ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದು. ಈ ಎಸೆತವನ್ನು 2022ರ ಸ್ಟಾಕ್ ಹೋಮ್ ಡೈಮಂಡ್ ಲೀಗ್ ನಲ್ಲಿ ಎಸೆದಿದ್ದರು. ಈ ಬಾರಿ ಒಲಿಂಪಿಕ್ಸ್ನಲ್ಲಿ 90 ಮೀ. ದೂರ ಎಸೆಯುವ ಗುರಿಯನ್ನು ಅವರು ಹೊಂದಿದ್ದಾರೆ.