ಪಲ್ಲೆಕೆಲೆಯ, ಜು.27(DaijiworldNews/AA): ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯು ಇಂದಿನಿಂದ ಆರಂಭಗೊಳ್ಳಲಿದ್ದು, ಇಂದು ಸಂಜೆ 7 ಗಂಟೆಗೆ ಪಲ್ಲೆಕೆಲೆಯ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಶ್ರೀಲಂಕಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ಅನಾರೋಗ್ಯದಿಂದ ತಂಡದ ಮತ್ತೊಬ್ಬ ವೇಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಅನಾರೋಗ್ಯದ ಕಾರಣ ವೇಗಿ ಬಿನೂರ ಫರ್ನಾಂಡೊ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಮೇಶ್ ಮೆಂಡಿಸ್ ಅವರನ್ನು ಸ್ಟ್ಯಾಂಡ್ಬೈ ಆಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದಿದೆ. ಅಲ್ಲದೆ ಅನಾರೋಗ್ಯಕ್ಕೆ ತುತ್ತಾಗಿರುವ ಫೆರ್ನಾಂಡೋ ಮೊದಲ ಟಿ20 ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ತಿಳಿಸಿದೆ.
ಭಾರತ ವಿರುದ್ಧದ ಸರಣಿಗೂ ಮುನ್ನ ಅನಾರೋಗ್ಯಕ್ಕೊಳಗಾಗಿರುವ ಶ್ರೀಲಂಕಾ ತಂಡದ 3ನೇ ಬೌಲರ್ ಬಿನೂರ ಫರ್ನಾಂಡೊ ಆಗಿದ್ದು, ಇದೀಗ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಬಿನೂರ ಫರ್ನಾಂಡೊ ಅವರಿಗೂ ಮುನ್ನ ಬೆರಳಿನ ಗಾಯದಿಂದಾಗಿ ತಂಡದ ಸ್ಟಾರ್ ವೇಗದ ಬೌಲರ್ ನುವಾನ್ ತುಷಾರ ಈ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಈ ಮೂಲಕ ಲಂಕಾ ತಂಡ ಹೊಡೆತದ ಮೇಲೆ ಹೊಡೆತ ಬಿದ್ದಂತಾಗಿದೆ.