ಪ್ಯಾರಿಸ್, ಜು.31(DaijiworldNews/AA): ಒಲಿಂಪಿಕ್ಸ್ನ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಡೆದ ಪಂದ್ಯದಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಭಾರೀ ಜಯ ಸಾಧಿಸಿದ್ದಾರೆ.
ಬ್ಯಾಡ್ಮಿಂಟನ್ ಪಂದ್ಯದಲ್ಲಿ ಎಸ್ಟೋನಿಯಾದ ಕ್ರಿಸ್ಟಿನ್ ಕೂಬ ಅವರನ್ನು ಸೋಲಿಸಿ ಪಿವಿ ಸಿಂಧು ಮುಂದಿನ ಹಂತಕ್ಕೆ ಏರಿದ್ದಾರೆ. ಪಂದ್ಯದ ಆರಂಭದಿಂದಲೇ ಉತ್ತಮ ನಿಯಂತ್ರಣ ಸಾಧಿಸಿದ್ದ ಸಿಂಧು, ಮೊದಲ ಸೆಟ್ ನಲ್ಲೇ ಎದುರಾಳಿ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದರು. ಅದರಂತೆ ಮೊದಲ ಸೆಟ್ ಅನ್ನು 21-9 ಅಂಕಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ದ್ವಿತೀಯ ಸೆಟ್ನ ಪ್ರಾರಂಭದಲ್ಲಿ ಕ್ರಿಸ್ಟಿನ್ ಕೂಬ ಕಡೆಯಿಂದ ಉತ್ತಮ ಪೈಪೋಟಿ ಕಂಡು ಬಂದರೂ, ಪಿವಿ ಸಿಂಧು ಅವರು ಉತ್ತಮ ಪ್ರದರ್ಶನ ನೀಡಿ ಆರಂಭಿಕ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಕೂಬ ಅವರು 6 ಅಂಕಗಳನ್ನು ಸಿಂಧೂ ಅವರು 15 ಅಂಕಗಳನ್ನು ಕಲೆಹಾಕುತ್ತಾರೆ.
ಬಳಿಕ ಕ್ರಿಸ್ಟಿನ್ ಕೂಬ ಅವರು ಸತತ ತಪ್ಪುಗಳನ್ನು ಎಸಗಿದರೆ, ಸಿಂಧೂ ಅವರು ಉತ್ತಮ ಪ್ರದರ್ಶನ ಮುಂದುವರೆಸಿದರು. ಹೀಗಾಗಿ ದ್ವಿತೀಯ ಸೆಟ್ ಅನ್ನು ಸಿಂಧು 21-10 ಅಂಕಗಳ ಅಂತರದಿಂದ ಜಯ ಸಾಧಿಸಿದರು. ಈ ಮೂಲಕ ಪಿವಿ ಸಿಂಧು ಪ್ರಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.