ನವದೆಹಲಿ, ಆ 1(DaijiworldNews/MS): ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಹಾಗೂ ಮಾಜಿ ಮುಖ್ಯ ಕೋಚ್ ಕೂಡ ಆಗಿದ್ದ ಅಂಶುಮಾನ್ ಗಾಯಕ್ವಾಡ್ ನಿಧನರಾಗಿದ್ದಾರೆ. 71 ವರ್ಷದ ಮಾಜಿ ಕ್ರಿಕೆಟಿಗ ದೀರ್ಘ ಸಮಯದಿಂದ ರಕ್ತದ ಕ್ಯಾನ್ಸರ್ ರೋಗದ ವಿರುದ್ಧ ಹೋರಾಟ ನಡೆಸಿದ್ದರು.
ಹೆಚ್ಚಿನ ಚಿಕಿತ್ಸೆ ಸಲುವಾಗಿ ಲಂಡನ್ಗೆ ತೆರಳಿದ್ದ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 1 ಕೋಟಿ ರೂ. ಧನ ಸಹಾಯ ಮಾಡಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಘೋಷಿಸಿದ್ದರು. ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಗಾಯಕ್ವಾಡ್ ಇಹಲೋಕ ತ್ಯಜಿಸಿದ್ದಾರೆ.
ಬಲಗೈ ಬ್ಯಾಟರ್ ಆಗಿದ್ದ ಅವರು ಭಾರತ ತಂಡದಲ್ಲಿ ೪೦ ಟೆಸ್ಟ್ ಮತ್ತು ೧೫ ಏಕದಿನ ಪಂದ್ಯಗಳಲ್ಲಿ ಆಡಿದ್ದರು ೨೦೬ ಪ್ರಥಮ ದರ್ಜೆ ಪಂದ್ಯಗಳಲ್ಲಿಯೂ ಆಡಿದ್ದರು. ಭಾರತ ಕ್ರಿಕೆಟ್ ತಂಡದಲ್ಲಿ 12 ವರ್ಷಗಳ ಕಾಲ ಆಡಿದ್ದ ಅನ್ಶುಮನ್ ಗಾಯಕ್ವಾಡ್, ತಮ್ಮ ಕ್ರಿಕೆಟ್ ಕೆರಿಯರ್ನಲ್ಲಿ 40 ಟೆಸ್ಟ್ ಪಂದ್ಯಗಳು ಮತ್ತು 15 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 2 ಶತಕಗಳನ್ನು ಒಳಗೊಂಡಂತೆ ಒಟ್ಟಾರೆ 2254 ಅಂತಾರಾಷ್ಟ್ರೀಯ ರನ್ ಕಲೆಹಾಕಿದ್ದಾರೆ. 1983ರಲ್ಲಿ ಜಲಂಧರ್ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅವರು ಮನಮೋಹಕ 201 ರನ್ಗಳ ದ್ವಿಶತಕ ಬಾರಿಸುವ ಮೂಲಕ ಕ್ರಿಕೆಟ್ ಲೋಕದಲ್ಲಿ ಭಾರಿ ಸದ್ದು ಮಾಡಿದ್ದರು.
ಕ್ರಿಕೆಟ್ ಬ್ಯಾಟರ್ ಗಳಿಗೆ ಹೆಲ್ಮೆಟ್ ಕಡ್ಡಾಯವಾಗುವ ಮುಂಚಿನ ಕಾಲಘಟ್ಟದಲ್ಲಿ ದಿಟ್ಟ ಆರಂಭಿಕ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಸುನಿಲ್ ಗಾವಸ್ಕರ್ ಜೊತೆಗೆ ಇನ್ನಿಂಗ್ಸ್ ಆರಂಭಿಸುತ್ತಿದ್ದರು.