ಭುವನೇಶ್ವರ, ಮೇ 20 (Daijiworld News/MSP): ಪುರುಷರ ಹಾರ್ಮೋನು ಹೆಚ್ಚಿದ ಕಾರಣ ಐ ಎ ಎ ಎಫ್ ನಿಂದ 1 ವರ್ಷ ನಿಷೇಧಕ್ಕೆ ಒಳಗಾಗಿ ಬಳಿಕ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಿ ಯಶ ಕಂಡಿದ್ದ ಏಶ್ಯನ್ ಗೇಮ್ಸ್ ಪದಕ ಗೆದ್ದ ವೇಗದ ಓಟಗಾರ್ತಿ ಒಡಿಶಾದ ದ್ಯುತಿ ಚಂದ್ ತಾವು ಸಲಿಂಗಿ ಎನ್ನುವ ಸ್ಫೋಟಕ ಸುದ್ದಿಯನ್ನು ಹೊರಹಾಕಿದ್ದಾರೆ. ಇದರ ಬೆನ್ನಲ್ಲೇ ಕುಟುಂಬದಿಂದ ಬಹಿಷ್ಕಾರದ ಎಚ್ಚರಿಕೆಯನ್ನು ಎದುರಿಸಿದ್ದಾರೆ.
ನನ್ನ ಗ್ರಾಮದ ಯುವತಿ ಜತೆ ನಾನು ಸಲಿಂಗಿ ಸಂಬಂಧ ಹೊಂದಿದ್ದೇನೆ. ಆಕೆ ಓರ್ವ ಕ್ರೀಡಾಭಿಮಾನಿ ಹುಡುಗಿಯಾಗಿದ್ದು ನಾನು ಆಕೆಯ ಜತೆ ಮುಕ್ತವಾಗಿದ್ದೇನೆ. 19 ವರ್ಷದ ಯುವತಿ ಜತೆ ಕಳೆದ ಐದು ವರ್ಷಗಳಿಂದ ಸಂಬಂಧದಲ್ಲಿದ್ದೇನೆ. ಆಕೆ ದ್ವಿತೀಯ ಬಿ.ಎ ಓದುತ್ತಿದ್ದಾಳೆ. ಆಕೆಯೊಂದಿಗೆ ನನ್ನ ವೈಯಕ್ತಿಕ ಎಲ್ಲ ವಿಚಾರವನ್ನೂ ಹಂಚಿಕೊಳ್ಳುತ್ತೇನೆ. ಆಕೆ ನನ್ನ ಜೀವನದ ಕಷ್ಟದ ದಿನಗಳನ್ನು ಕಂಡು ಅಭಿಮಾನಿಯಾಗಿದ್ದಾಳೆ. ನನ್ನಿಂದ ಸ್ಫೂರ್ತಿ ಪಡೆದಿದ್ದಾಳೆ. ಇದು ನನಗೂ ಇಷ್ಟವಾಯಿತು. ಹಾಗಾಗಿ ನಾವಿಬ್ಬರು ಒಂದಾಗಿದ್ದೇವೆ. ಕಾನೂನಿನ ಪ್ರಕಾರ ನಮ್ಮ ಸಂಬಂಧಕ್ಕೆ ತೊಡಕಿಲ್ಲ. ಆಕೆಯ ಓಪ್ಪಿಗೆ ಪಡೆದೆ ಈ ವಿಚಾರ ಬಹಿರಂಗಪಡಿಸುತ್ತಿದ್ದೇನೆ ’ ಎಂದು ದ್ಯುತಿ ಚಂದ್ ಹೇಳಿದ್ದಾರೆ.
ಸಲಿಂಗ ಪ್ರೇಮವನ್ನು ಮುಕ್ತವಾಗಿ ಒಪ್ಪಿಕೊಂಡ ಕೆಲವೇ ಕೆಲವು ಕ್ರೀಡಾಳುಗಳಲ್ಲಿ ದ್ಯುತಿ ಚಂದ್ ಕೂಡಾ ಒಬ್ಬರಾಗಿದ್ದಾರೆ. ಅಥ್ಲೀಟ್ ಪಿಂಕಿ ಪ್ರಮಾಣಿಕ್ ಮೇಲೆ ಲಿವ್ ಇನ್ ಜತೆಗಾರ್ತಿಯೇ ರೇಪ್ ನ ಆರೋಪ ಮಾಡಿದ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ನಾನು ಈ ವಿಚಾರವನ್ನು ಸಾರ್ವಜನಿಕವಾಗಿ ತಿಳಿಸಿದ್ದೇನೆ ಎಂದಿದ್ದಾರೆ.