ಲಾಹೋರ್, ಮೇ 20 (Daijiworld News/SM): ಈ ತಿಂಗಳಾಂತ್ಯಕ್ಕೆ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಪ್ರಶಸ್ತಿ ಗೆಲ್ಲಲು ಪಾಕಿಸ್ತಾನ ತಂಡ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮಹತ್ವದ ಬದಲಾವಣೆ ಮಾಡಿ ತಂಡ ಪ್ರಕಟಗೊಳಿಸಿದೆ. ಈ ಹಿಂದೆ ಆಯ್ಕೆ ಮಾಡಿದ್ದ ತಂಡದಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಹೀನಾಯ ಸೋಲನುಭವಿಸಿರುವ ಪಾಕ್ ತಂಡ ವರ್ಲ್ಡ್ ಕಪ್ ಪಂದ್ಯಗಳಲ್ಲಿ ಗೆದ್ದು ಸೇಡು ತೀರಿಸಿಕೊಳ್ಳಬೇಕೆಂಬ ನಿರ್ಣಯ ಕೈಗೊಂಡಿದೆ. ಹೊಸದಾಗಿ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಶಿಫ್ ಅಲಿ, ವೇಗದ ಬೌಲರ್ ಮೊಹಮ್ಮದ್ ಅಮೀರ್ ಹಾಗೂ ರಿಯಾಜ್ಗೆ ಅವಕಾಶ ನೀಡಿದೆ.
2011 ಹಾಗೂ 2015ರ ವಿಶ್ವಕಪ್ನಲ್ಲಿ ರಿಯಾಜ್ ಪಾಕ್ ಪರ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಈ ಹಿಂದೆ 15 ಸದಸ್ಯರ ತಂಡ ಪ್ರಕಟಗೊಳಿಸಿದ್ದ ಪಾಕ್ ಕ್ರಿಕೆಟ್ ಮಂಡಳಿ, ಮೊಹಮ್ಮದ್ ಅಮೀರ್ ಅವರನ್ನು ತಂಡದಿಂದ ಕೈಬಿಟ್ಟಿತ್ತು. ಆದರೆ ಬೌಲಿಂಗ್ ವಿಭಾಗದಲ್ಲಿ ಇತರ ಆಟಗಾರರಿಂದ ನಿರೀಕ್ಷೆಯ ಫಲಿತಾಂಶಾ ಸಿಗದ ಹಿನ್ನೆಲೆ ಅಮೀರ್ ಗೆ ಮತ್ತೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಒಟ್ಟಿನಲ್ಲಿ ಈ ಬಾರಿಯ ವಿಶ್ವಕಪ್ ಮೇಲೆ ಪಾಕಿಸ್ತಾನ ಕಣ್ಣಿಟ್ಟಿದ್ದು, ಯಾವ ರೀತಿಯ ಪ್ರದರ್ಶನ ನೀಡಲಿದೆ ಅನ್ನೋದೇ ಕುತೂಹಲ.