ನವದೆಹಲಿ, ಆ 8(DaijiworldNews/MS): ಪ್ಯಾರಿಸ್ ಒಲಿಂಪಿಕ್ಸ್ನ ಕುಸ್ತಿ ಫೈನಲ್ನಿಂದ ಅನರ್ಹಗೊಂಡ ಬೆನ್ನಲ್ಲೇ ವಿನೇಶ್ ಫೋಗಟ್ ಕುಸ್ತಿಗೆ ವಿದಾಯ ಹೇಳಿದ್ದಾರೆ. ಫೈನಲ್ ಪ್ರವೇಶಿಸಿ ಇತಿಹಾಸ ಬರೆಯಬೇಕಿದ್ದ ಭಾರತದ ಹೆಮ್ಮೆಯ ಪುತ್ರಿ ಕುಸ್ತಿಪಟು ವಿನೇಶ್ ಫೋಗಾಟ್ ಕೇವಲ 100 ಗ್ರಾಂ ತೂಕ ಹೆಚ್ಚಳವಾದ ಕಾರಣ ಒಲಿಂಪಿಕ್ಸ್ನಿಂದ ಅನರ್ಹಗೊಳಿಸಲಾಗಿತ್ತು.
ವಿನೇಶ್ ಫೋಗಟ್ ಗುರುವಾರ ಬೆಳಗ್ಗೆ ಟ್ವೀಟ್ ಮಾಡಿ ನಿವೃತ್ತಿ ಘೋಷಣೆ ಮಾಡಿದ್ದಾರೆ, "ಕುಸ್ತಿ ನನ್ನ ವಿರುದ್ದ ಗೆದ್ದಿದೆ. ನಾನು ಸೋತಿದ್ದೇನೆ. ನಿಮ್ಮ ಕನಸು ಹಾಗೂ ನನ್ನ ಧೈರ್ಯ ಎಲ್ಲವೂ ನುಚ್ಚುನೂರಾಯಿತು ಈಗ ನನಗೆ ಇದಕ್ಕಿಂತ ಹೆಚ್ಚಿನ ಶಕ್ತಿ ಇಲ್ಲ. 2021-2024 ಕುಸ್ತಿಗೆ ವಿದಾಯ. ನನ್ನನ್ನು ಕ್ಷಮಿಸಿದ್ದಕ್ಕೆ ನಿಮ್ಮೆಲ್ಲರಿಗೂ ನಾನು ಋಣಿಯಾಗಿರುತ್ತೇನೆ" ಎಂದು ಪೋಸ್ಟ್ ಹಾಕಿದ್ದಾರೆ.
ಈ ಮೊದಲು 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ವಿನೇಶ್ ಈ ಬಾರಿ ಅವಕಾಶ ಸಿಗದ ಕಾರಣ 50 ಕೆಜಿ ವಿಭಾಗದಲ್ಲಿ ಸ್ಪರ್ಧೆಗೆ ಇಳಿದಿದ್ದರು. ವಿನೇಶ್ ಅವರ ತೂಕ 50 ಕೆಜಿ, 100 ಗ್ರಾಂ ಇದ್ದ ಕಾರಣ ಅವರನ್ನು ಅನರ್ಹಗೊಳಿಸಲಾಯಿತು. 2.8 ಕೆಜಿ ತೂಕ ಇಳಿಸಲು ರಾತ್ರಿಯಿಡೀ ಸೈಕ್ಲಿಂಗ್, ಸ್ಕಿಪ್ಪಿಂಗ್, ರನ್ನಿಂಗ್ ಮಾಡಿದ ವಿನೇಶ್, ಒಂದೂ ತೊಟ್ಟು ನೀರು ಕೂಡ ಕುಡಿಯದೇ ಬೆವರು ಸುರಿಸಿದ್ದರು. ಆದರೂ 100 ಹೆಚ್ಚಿಗೆ ಇದ್ದ ಕಾರಣ ಅವರನ್ನು ಅನರ್ಹಗೊಳಿಸಲಾಗಿದೆ. ಇದರಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ವಿನೇಶ್ ಫೋಗಾಟ್ ಕುಸ್ತಿ ಜಗತ್ತಿಗೆ ವಿದಾಯ ಹೇಳಿದ್ದಾರೆ.