ಪ್ಯಾರಿಸ್, ಆ.14(DaijiworldNews/AK): ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರು ಸಲ್ಲಿಸಿರುವ ಮೇಲ್ಮನವಿ ಮೇಲಿನ ತೀರ್ಪನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ ಮತ್ತೆ ಮುಂದಕ್ಕೆ ಹಾಕಿದೆ. ಭಾರತೀಯ ಕಾಲಮಾನ ಮಂಗಳವಾರ ರಾತ್ರಿ ತೀರ್ಪು ಪ್ರಕಟವಾಗಬೇಕಿತ್ತು. ಆದರೆ ಈಗ ಆ.16 ರಂದು ತೀರ್ಪು ನೀಡುವುದಾಗಿ ಪ್ರಕಟಿಸಿದೆ.
ನಿಗದಿಗಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕೆ ಫೋಗಟ್ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ. ವಿಭಾಗದ ಫೈನಲ್ನಿಂದ ಅನರ್ಹಗೊಳಿಸಲಾಗಿತ್ತು.ಕ್ರೀಡಾಕೂಟದ ಸಂದರ್ಭದಲ್ಲಿ ವಿವಾದ ಪರಿಹಾರಕ್ಕಾಗಿ ವಿಶೇಷವಾಗಿ ಸ್ಥಾಪಿಸಲಾಗಿರುವ ಸಿಎಎಸ್ನ ತಾತ್ಕಾಲಿಕ ವಿಭಾಗಕ್ಕೆ ತಮ್ಮ ವಿರುದ್ಧದ ಕ್ರಮ ಪ್ರಶ್ನಿಸಿ ವಿನೇಶ್ ಆ.9 ರಂದು ಮೇಲ್ಮನವಿ ಸಲ್ಲಿಸಿದ್ದರು.
ಮನವಿಯನ್ನು ಆಲಿಸಿದ ಸಿಎಎಸ್ ಆರಂಭದಲ್ಲಿ ಆ.10 ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿತ್ತು. ನಂತರ ಆ.13 ರಂದು ಪ್ರಕಟಿಸಲಾಗುವುದು ಎಂದಿತ್ತು. ಆದರೆ ಈಗ ಮೂರನೇ ಬಾರಿ ಮುಂದೂಡಿದ್ದು, ಆ.16 ರಂದು ಪ್ರಕಟಿಸುವುದಾಗಿ ಹೇಳಿದೆ.
ಫೈನಲ್ ಪಂದ್ಯದ ಮುನ್ನಾದಿನ ನಾನು ಮೂರು ಪಂದ್ಯವನ್ನು ಆಡಿದ್ದೇನೆ. ಆ ದಿನ ನಿಗದಿತ 50 ಕೆಜಿ ತೂಕದ ಮಿತಿಯಲ್ಲಿ ಇದ್ದ ಕಾರಣ ಜಂಟಿಯಾಗಿ ಬೆಳ್ಳಿ ಪದಕದ ಗೌರವ ನೀಡಬೇಕೆಂದು ಮನವಿ ಮಾಡಿದ್ದರು.