ಮುಂಬೈ, ಆ.14(DaijiworldNews/AK): ಭಾರತ ತಂಡದ ನೂತನ ಬೌಲಿಂಗ್ ಕೋಚ್ ಆಗಿ ಸೌತ್ ಆಫ್ರಿಕಾದ ಮಾಜಿ ವೇಗಿ ಮೋರ್ನೆ ಮೊರ್ಕೆಲ್ ಅವರನ್ನು ನೇಮಕ ಮಾಡಲಾಗಿದೆ.
https://daijiworld.ap-south-1.linodeobjects.com/Linode/img_tv247/15-08-2024akmorke.jpg
ಈ ಹಿಂದೆ ಐಪಿಎಲ್ ಮತ್ತು ಎಸ್ಎ20 ಮತ್ತು ಪಾಕಿಸ್ತಾನ್ ತಂಡದ ಬೌಲಿಂಗ್ ಕೋಚ್ ಆಗಿ ಮೊರ್ಕೆಲ್ ಕಾರ್ಯ ನಿರ್ವಹಿಸಿದ್ದರು.ಇದೀಗ ಟೀಮ್ ಇಂಡಿಯಾ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಮುಂಬರುವ ಬಾಂಗ್ಲಾದೇಶ್ ವಿರುದ್ಧದ ಸರಣಿಯೊಂದಿಗೆ ಮೋರ್ನೆ ಮೊರ್ಕೆಲ್ ಟೀಮ್ ಇಂಡಿಯಾ ಪರ ಕಾರ್ಯ ನಿರ್ವಹಿಸಲಿದ್ದಾರೆ. ಇದಕ್ಕೂ ಮುನ್ನ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸಾಹಿರಾಜ್ ಬಹುತುಲೆ ಟೀಮ್ ಇಂಡಿಯಾದ ಹಂಗಾಮಿ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.
ಮೋರ್ನೆ ಮೊರ್ಕೆಲ್ ಈ ಹಿಂದೆ ಗೌತಮ್ ಗಂಭೀರ್ ಅವರ ನಾಯಕತ್ವದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು. ಹಾಗೆಯೇ ಗಂಭೀರ್ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಗಂಭೀರ್ ನೇತೃತ್ವದ ಟೀಮ್ ಇಂಡಿಯಾಗೆ ಮೊರ್ಕೆಲ್ ಸೇರ್ಪಡೆಗೊಂಡಿದ್ದಾರೆ.
ಸೌತ್ ಆಫ್ರಿಕಾ ಪರ 86 ಟೆಸ್ಟ್ ಪಂದ್ಯಗಳನ್ನಾಡಿರುವ ಮೋರ್ನೆ ಮೊರ್ಕೆಲ್ ಒಟ್ಟು 309 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹಾಗೆಯೇ 117 ಏಕದಿನ ಪಂದ್ಯಗಳಿಂದ 188 ವಿಕೆಟ್ ಪಡೆದಿದ್ದಾರೆ. ಇನ್ನು 44 ಟಿ20 ಪಂದ್ಯಗಳನ್ನಾಡಿರುವ ಮೊರ್ಕೆಲ್ 47 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.