ಸುಳ್ಯ, ಡಿ.07(DaijiworldNews/AA): ಮೂರು ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಸೇವಾಜೆಯ ಬೆಳ್ಯಪ್ಪ ಗೌಡ (85) ಅವರ ತಲೆ ಬುರುಡೆ ಹಾಗೂ ಬಟ್ಟೆ ಸೇವಾಜೆಯ ಬಿದಿರಿನ ಪೊದೆಯಲ್ಲಿ ಪತ್ತೆಯಾಗಿವೆ.
ಸೆ. 9ರಂದು ಬೆಳ್ಯಪ್ಪ ಗೌಡ ಅವರು ಮನೆಯಿಂದ ನಾಪತ್ತೆಯಾಗಿದ್ದರು. ಎಲ್ಲೆಡೆ ಹುಡುಕಾಟ ನಡೆಸಿದ್ದರೂ ಅವರು ಪತ್ತೆಯಾಗಿರಲಿಲ್ಲ. ಕುಟುಂಬದ ಸದಸ್ಯರು ಜ್ಯೋತಿಷಿಯ ಮೊರೆಯೂ ಹೋಗಿದ್ದರು. ಮೃತರ ಪುತ್ರ ನೀಡಿದ ದೂರಿನಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಳ್ಯಪ್ಪ ಗೌಡ ಅವರ ತಲೆ ಬುರುಡೆ ಮತ್ತು ಬಟ್ಟೆಯು ಮನೆಯಿಂದ ಕೇವಲ ಅರ್ಧ ಕಿ.ಮೀ. ದೂರದಲ್ಲಿರುವ ಬಿದಿರಿನ ಪೊದೆಯಲ್ಲಿ ದೊರೆತಿದ್ದು, ಈ ಜಾಗದಲ್ಲಿ 3 ತಿಂಗಳ ಹಿಂದೆ ಹುಡುಕಾಟ ನಡೆಸಿದ್ದರೂ ಏನೂ ಪತ್ತೆಯಾಗಿರಲಿಲ್ಲ. ಹೀಗಾಗಿ ಅವರ ಸಾವು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.