ಅಹ್ಮದಾಬಾದ್, ಡಿ.08(DaijiworldNews/AA): 70 ಸಾವಿರ ರೂಪಾಯಿ ಶುಲ್ಕ ವಿಧಿಸಿ ಕೇವಲ 8ನೇ ತರಗತಿ ಪಾಸಾದವರಿಗೂ ವೈದ್ಯಕೀಯ ಪದವಿ ನೀಡುವ ಜಾಲವನ್ನು ಗುಜರಾತ್ ಪೊಲೀಸರು ಪತ್ತೆ ಮಾಡಿದ್ದು, 14 ಮಂದಿ ನಕಲಿ ಪದವಿ ಪಡೆದ ನಕಲಿ ವೈದ್ಯರನ್ನು ಬಂಧಿಸಿದ್ದಾರೆ.
ಗುಜರಾತ್ ನ ಸೂರತ್ ಮೂಲದ ಈ ಜಾಲ 1200 ಮಂದಿಗೆ ನಕಲಿ ಪದವಿಯನ್ನು ವಿತರಿಸಿದೆ. ಡಾ.ರಮೇಶ್ ಗುಜರಾತಿ ಎಂಬಾತ ಪ್ರಮುಖ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಗುಜರಾತ್ ನ ಎಲೆಕ್ಟ್ರೋ ಹೋಮಿಯೋಪಥಿಕ್ ಮೆಡಿಸಿನ್ ಇಲಾಖೆ ನೀಡುವ ವೈದ್ಯಕೀಯ ಪದವಿಯನ್ನು ಈ ಜಾಲ ನೀಡುತ್ತಿತ್ತು. ಹಲವಾರು ಅರ್ಜಿಗಳು, ಪ್ರಮಾಣಪತ್ರಗಳು ಮತ್ತು ಸ್ಟ್ಯಾಂಪ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ವೈದ್ಯಕೀಯ ಪದವಿ ಪಡೆದ ಮೂವರು ಅಲೋಪಥಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿಯ ಆಧಾರದ ಮೇರೆಗೆ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಂಥ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ವೇಳೆ ಈ ನಕಲಿ ವೈದ್ಯರು ಬಿಇಹೆಚ್ಎಂ ಇಲಾಖೆ ನೀಡಿದ ಪದವಿ ಪ್ರಮಾಣಪತ್ರಗಳನ್ನು ತೋರಿಸಿದ್ದಾರೆ. ಆದರೆ ಗುಜರಾತ್ ಸರ್ಕಾರ ಅಂತಹ ಯಾವುದೇ ಪದವಿಯನ್ನು ನೀಡುವುದಿಲ್ಲ ಎಂಬುದನ್ನ ಅರಿತಿದ್ದ ಅಧಿಕಾರಿಗಳು ಇದು ನಕಲಿ ಎಂಬ ತೀರ್ಮಾನಕ್ಕೆ ಬಂದರು.
ನಕಲಿ ವೆಬ್ಸೈಟ್ನಲ್ಲಿ ಆರೋಪಿಗಳು ಪದವಿಗಳನ್ನು ನೋಂದಾಯಿಸುತ್ತಿದ್ದರು. ಭಾರತದಲ್ಲಿ ಎಲೆಕ್ಟ್ರೋ ಹೋಮಿಯೋಪಥಿಯನ್ನು ನಿರ್ಬಂಧಿಸುವ ಯಾವುದೇ ನಿಯಮಾವಳಿಗಳು ಇಲ್ಲ ಎನ್ನುವುದನ್ನು ತಿಳಿದುಕೊಂಡ ಆರೋಪಿಗಳು ಈ ಪದವಿಗಳನ್ನು ನೀಡುವ ಮಂಡಳಿಯನ್ನು ರಚಿಸಿಕೊಂಡಿದ್ದರು. ಐದು ಜನರನ್ನ ನೇಮಿಸಿಕೊಂಡು ಎಲೆಕ್ಟ್ರೋ ಹೋಮಿಯೋಪಥಿ ತರಬೇತಿ ನೀಡಿದ್ದರು. ಮೂರು ವರ್ಷದ ಒಳಗಾಗಿ ಅವರಿಗೆ ಪದವಿ ನೀಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಳಿಕ ರಾಜ್ಯ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಗುಜರಾತ್ ಆಯುಷ್ ಸಚಿವಾಲಯದ ವತಿಯಿಂದ ಪದವಿ ನೀಡಲಾಗುವುದು ಎಂದು ಆರೋಪಿಗಳು ಪ್ರಚಾರ ಮಾಡಿ ಈ ನಕಲಿ ಪದವಿ ನೀಡುತ್ತಿದ್ದರು. ಈ ಪ್ರಮಾಣಪತ್ರಕ್ಕೆ 70 ಸಾವಿರ ಶುಲ್ಕ ವಿಧಿಸಿ, ಅಲೋಪಥಿ, ಹೋಮಿಯೋಪಥಿ ಮತ್ತು ಆರೋಗ್ಯ ವೈದ್ಯಪದ್ಧತಿಯಲ್ಲಿ ಔಷಧಿ ಔಷಧಿ ನೀಡಲು ಅವಕಾಶ ನೀಡಲಾಗಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.