ಬೆಂಗಳೂರು, ಡಿ.11(DaijiworldNews/AA): ಕೇರಳಕ್ಕೆ ಉಪಕಾರಿ; ಕರ್ನಾಟಕಕ್ಕೆ ಮಾರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಯನಾಡು ಪುನರ್ವಸತಿ ಯೋಜನೆಯ ಭಾಗವಾಗಿ 100 ಮನೆಗಳನ್ನು ಕಟ್ಟಿಸಿಕೊಡುವುದಾಗಿ ಕರ್ನಾಟಕ ಸರ್ಕಾರ ತಿಳಿಸಿತ್ತು. ಆದರೆ ಕೇರಳ ಸರ್ಕಾರದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ಇದೀಗ ಮತ್ತೊಮ್ಮೆ ಕೇರಳ ಸಿಎಂ ಪಿಣರಾಯಿ ವಿಜಯನ್ಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಶೋಕ್ ಅವರು, ಭ್ರಷ್ಟಾಚಾರದ ಕಳಂಕ ಮೆತ್ತಿಕೊಂಡು, ಭಂಡತನದಿಂದ ಖುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸಿಎಂ ಸಿದ್ದರಾಮಯ್ಯನವರ ಸರ್ಕಾರ, ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಅಕಾಲಿಕ ಮಳೆಯಿಂದ ಬೆಳೆ ಹಾನಿಗೊಳಗಾಗಿ ಸಂಕಷ್ಟದಲ್ಲಿರುವ ರೈತತರಿಗೆ ಪರಿಹಾರ ಕೊಡಲು ಹಣವಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಔಷಧಿಯಿಂದ ಸಾವನ್ನಪ್ಪಿರುವ ಬಾಣಂತಿ ಮಹಿಳೆಯರ ಕುಟುಂಬಗಳಿಗೆ ಪರಿಹಾರ ಕೊಟ್ಟಿಲ್ಲ. ಬೆಂಗಳೂರಿನ ಉದ್ದಗಲಕ್ಕೂ ಬಾಯ್ತೆರೆದಿರುವ ರಸ್ತೆಗುಂಡಿ ಮುಚ್ಚಲು ಹಣವಿಲ್ಲ. ಆದರೆ ಹೈಕಮಾಂಡ್ ನಾಯಕರನ್ನು ಓಲೈಸಲು ಕೇರಳದಲ್ಲಿ ಮನೆ ನಿರ್ಮಿಸಿಕೊಡಲು ಹೊರಟಿದೆ ಈ ಕಾಂಗ್ರೆಸ್ ಸರ್ಕಾರ ಎಂದು ಹೇಳಿದ್ದಾರೆ.