ಬೆಂಗಳೂರು, ಡಿ.12(DaijiworldNews/AA): ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಇದೇ ಮೊಟ್ಟ ಮೊದಲ ಬಾರಿಗೆ ಪ್ರಕರಣವೊಂದರ ತೀರ್ಪನ್ನು ಕನ್ನಡದಲ್ಲೇ ಪ್ರಕಟಿಸಿದೆ.
ಡಿ.11 ಭಾರತ ಭಾಷಾ ದಿವಸದ ಪ್ರಯುಕ್ತ ಸಾಂಕೇತಿಕವಾಗಿ ಡಿ.12 ನ್ಯಾ. ಕೃಷ್ಣ ಎಸ್.ದೀಕ್ಷಿತ್, ನ್ಯಾ.ಸಿ.ಎಂ.ಜೋಶಿ ಅವರಿದ್ದ ಪೀಠ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲೇ ತೀರ್ಪು ನೀಡಿದೆ. ನಂಜಾವಧೂತ ಸ್ವಾಮಿ ವಿರುದ್ಧ ಎಸ್.ಲಿಂಗಣ್ಣ ಎನ್ನುವರು ಸಲ್ಲಿಸಿದ್ದ ಮೂಲ ಮೇಲ್ಮನವಿಯನ್ನು ಪೀಠ ಪುರಸ್ಕರಿಸಿದೆ. ಈ ಪ್ರಕರಣದ ತೀರ್ಪನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರತ್ಯೇಕವಾಗಿ ನ್ಯಾಯಮೂರ್ತಿಗಳು ಬರೆದಿದ್ದಾರೆ.
ಕನ್ನಡದಲ್ಲೇ ತೀರ್ಪನ್ನು ಓದಿದ ಬಳಕ ನ್ಯಾ. ದೀಕ್ಷಿತ್ ಅವರು, ಇಂಗ್ಲೆಂಡ್ನಲ್ಲಿ 1730ರವರೆಗೆ ಲ್ಯಾಟಿನ್ ಭಾಷೆಯಲ್ಲಿ ಕೋರ್ಟ್ ಕಲಾಪ ನಡೆಯುತ್ತಿತ್ತು. 1730ರಿಂದ ಅವರ ಸ್ವಭಾಷೆ ಇಂಗ್ಲಿಷ್ನಲ್ಲೇ ಕಲಾಪ ಆರಂಭಿಸಿದ್ದರು. ಆದರೆ ಜನಸಾಮಾನ್ಯರಿಗೆ ಕೋರ್ಟ್ಗಳ ತೀರ್ಪು ಏನಿದೆ ಎಂದು ತಿಳಿಯಬೇಕೆಂದು ಈ ಉಪಕ್ರಮ. ಕನ್ನಡ ಭಾಷೆ ನಶಿಸಬಾರದು ಕನ್ನಡಕ್ಕೆ ಮಾನ್ಯತೆ ಸಿಗಬೇಕು. ಸಾಂವಿಧಾನಿಕ ಸಂಸ್ಥೆಗಳು ಕನ್ನಡದಲ್ಲೇ ವ್ಯವಹರಿಸುವಂತಾಗಬೇಕು ಎಂದು ತಿಳಿಸಿದರು.