ಭೋಪಾಲ್, ಡಿ.15(DaijiworldNews/AA): ತಮಗೆ ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಬಿಜೆಪಿ ನಾಯಕರಿಂದ ಕಿರುಕುಳ ಎದುರಾಗಿದೆ ಎಂದು ಆರೋಪಿಸಿ ಡೆತ್ನೋಟ್ ಬರೆದಿಟ್ಟು ಮಧ್ಯಪ್ರದೇಶದ ಸೇಹೋರ್ ಜಿಲ್ಲೆಯಲ್ಲಿ ಉದ್ಯಮಿ ಮನೋಜ್ ಹಾಗೂ ಪತ್ನಿ ನೇಣಿಗೆ ಶರಣಾದ ಘಟನೆ ನಡೆದಿದೆ.
ಡೆತ್ನೋಟ್ನಲ್ಲಿ 'ನಮ್ಮ ಮಕ್ಕಳನ್ನು ಅನಾಥರನ್ನಾಗಿ ಮಾಡಬೇಡಿ, ಅವರನ್ನು ನೋಡಿಕೊಳ್ಳಿ' ಎಂದು ಮೃತ ದಂಪತಿ ರಾಹುಲ್ ಗಾಂಧಿಗೆ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ನ ಜಿತು ಪಟ್ವಾರಿ ಇದು ಆತ್ಮಹತ್ಯೆಯಲ್ಲ, ಸರಕಾರಿ ಪ್ರಾಯೋಜಿತ ಕೊಲೆ ಎಂದು ಎಂದು ಆರೋಪಿಸಿದ್ದಾರೆ. ಮಾಜಿ ಸಿಎಂ ಕಮಲ್ನಾಥ್ ಪ್ರತಿಕ್ರಿಯೆ ನೀಡಿ ಭಾರತ್ ಜೋಡೋ ಯಾತ್ರೆ ವೇಳೆ ಮನೋಜ್ ಅವರ ಮಕ್ಕಳು ರಾಹುಲ್ಗೆ ಪಿಗ್ಗಿ ಬ್ಯಾಂಕ್ ನೀಡಿದ್ದರು ಎಂದಿದ್ದಾರೆ.
ಆ ಕುಟುಂಬ ಕಾಂಗ್ರೆಸ್ಗೆ ಬೆಂಬಲ ನೀಡುತ್ತಿತ್ತು. ಹೀಗಾಗಿಯೇ ಬಿಜೆಪಿ ಅವರಿಗೆ ಕಿರುಕುಳ ನೀಡಿದೆ ಎಂದು ಆರೋಪಿಸಿದ್ದಾರೆ. ಅಕ್ರಮ ಹಣಕಾಸು ವರ್ಗಾವಣೆ ಸಂಬಂಧ ಇತ್ತೀಚೆಗಷ್ಟೇ ಇ.ಡಿ. ಮನೋಜ್ ಮನೆ ಮೇಲೆ ದಾಳಿ ನಡೆಸಿತ್ತು. ಘಟನೆ ಬೆನ್ನಲ್ಲೇ ರಾಹುಲ್ ಅವರು ದಂಪತಿಯ 3 ಮಕ್ಕಳೊಂದಿಗೆ ಮಾತನಾಡಿ ಸಾಂತ್ವನ ಹೇಳಿದ್ದಾರೆ.
ಇನ್ನು ಮೃತರ ಕುಂಟುಂಬದವರು ದುಃಖದಲ್ಲಿರುವುದರಿಂದ ಸದ್ಯಕ್ಕೆ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ತನಿಖೆ ಪ್ರಗತಿಯಲ್ಲಿರುವುದರಿಂದ ಅವರು ಹೆಚ್ಚಿನ ಮಾಹಿತಿ ತಿಳಿಸಿಲ್ಲ.