ಮಂಗಳೂರು, ಡಿ.15(DaijiworldNews/AA): ಜಿಪ್ಸಿ ವಾಹನ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಸಾವನ್ನಪ್ಪಿ, ಸಹಸವಾರೆ ಕೂಡಾ ಗಂಭೀರವಾಗಿ ಗಾಯಗೊಂಡ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಎದುರಿನ ಸರ್ವಿಸ್ ರಸ್ತೆಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.
ಎಲಿಯಾರ್ ಪದವು ಸಂಪಿಗೆದಡಿ ನಿವಾಸಿ ಅರುಣ್ ಪೂಜಾರಿ (43) ಮೃತರು. ಸಹಸವಾರೆ ಹೇಮಾವತಿ ಗಂಭೀರವಾಗಿ ಗಾಯಗೊಂಡವರು.
ಕಾಪಿಕಾಡು ಸಮೀಪದ ಬಾರ್ ನಲ್ಲಿ ಹಲವು ವರ್ಷಗಳಿಂದ ವೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರುಣ್, ಶನಿವಾರ ತಡರಾತ್ರಿ ಕರ್ತವ್ಯ ಮುಗಿಸಿ ಆಕ್ಟಿವಾ ಸ್ಕೂಟರ್ ಮೂಲಕ ಎಲಿಯಾರುಪದವು ಮನೆ ಕಡೆಗೆ ತೆರಳುತ್ತಿದ್ದರು. ಈ ವೇಳೆ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆ ನಡೆಸಿ ಬಂದ ಜಿಪ್ಸಿ ವಾಹನ ಚಾಲಕ ಸ್ಕೂಟರಿಗೆ ಢಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಢಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡ ಅರುಣ್ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಸಾವನ್ನಪ್ಪಿದ್ದಾರೆ. ಸಹಸವಾರೆ ಹೇಮಾವತಿ ಅವರ ಕಾಲಿಗೆ ಗಂಭೀರ ಗಾಯಗಳಾಗಿದೆ. ಜಿಪ್ಸಿ ವಾಹನ ಚಾಲಕ ಮದ್ಯಸೇವನೆ ಮಾಡಿದ್ದ ಎಂದು ಆರೋಪಿಸಲಾಗಿದೆ.
ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು, ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೃತರು ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.