ನವದೆಹಲಿ, ಡಿ.19(DaijiworldNews/AA): ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕುರಿತಂತೆ ಬಿಜೆಪಿ ನಾಯಕರಿಗೆ ಕನಿಷ್ಠ ಗೌರವವಿಲ್ಲ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಕಿಡಿ ಕಾರಿದ್ದಾರೆ.
ಅಂಬೇಡ್ಕರ್ ಕುರಿತಂತೆ ಅಮಿತ್ ಶಾ ಹೇಳಿಕೆ ಮತ್ತು ಅದಕ್ಕೆ ಬಿಜೆಪಿಗರ ಸಮರ್ಥನೆ ಕುರಿತಂತೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಅಮಿತ್ ಶಾ ಬಾಬಾಸಾಹೇಬರನ್ನು ಅವಮಾನಿಸಿದ್ದು ಮಾತ್ರವಲ್ಲದೆ, ಬಿಜೆಪಿ ಟ್ವಿಟರ್ನಲ್ಲಿ ಬಾಬಾಸಾಹೇಬರ ತಿರುಚಿದ ಚಿತ್ರವನ್ನು ಹಂಚಿಕೊಂಡಿದೆ. ಇದು ಬಾಬಾಸಾಹೇಬರ ಪ್ರತಿಮೆಯನ್ನು ಧ್ವಂಸ ಮಾಡುವ ಮನಸ್ಥಿತಿಯಾಗಿದೆ. ಬಿಜೆಪಿಗರನ್ನು ಯಾರು ನಂಬುತ್ತಾರೆ? ಮೀಸಲಾತಿಯನ್ನು ಅಂತ್ಯಗೊಳಿಸಲು ಬಯಸುವುದಿಲ್ಲ, ಸಂವಿಧಾನವನ್ನು ಬದಲಾಯಿಸಲು ಬಯಸುವುದಿಲ್ಲ ಎಂದು ಹೇಳುತ್ತಾರೆ. ಆದರೆ, ಸಂವಿಧಾನ ರಚಿಸಿದವರಿಗೆ ಅವರು ಗೌರವ ನೀಡುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದ ಇಂಡಿಯಾ ಬಣದ ನಾಯಕರು ಉದ್ಯಮಿ ಜಾರ್ಜ್ ಸೊರೋಸ್ ಚಿತ್ರ ಹಿಡಿದುಕೊಂಡಿರುವಂತಹ ತಿರುಚಿದ ಫೋಟೊವನ್ನು ಬಿಜೆಪಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿತ್ತು.