ಧಾರವಾಡದಲ್ಲಿ ದಾಖಲೆ ಬರೆದ ಅಗ್ನಿಹೋತ್ರ - 11,111 ಕುಟುಂಬಗಳ ಸದಸ್ಯರು ಭಾಗಿ!
Tue, Apr 15 2025 04:35:58 PM
ಧಾರವಾಡ, ಏ.15(DaijiworldNews/TA): ಯುನಿವರ್ಸಲ್ ನಾಲೆಡ್ಜ್ ಟ್ರಸ್ಟ್ ಪ್ರೇರಣೆಯಿಂದ ಗ್ರಾಮ ವಿಕಾಸ ಸಂಸ್ಥೆ ಆಯೋಜಿಸಿದ್ದ ಅಗ್ನಿಹೋತ್ರ ಕಾರ್ಯಕ್ರಮ ವಿಶ್ವ ದಾಖಲೆ ನಿರ್ಮಾಣ ಮಾಡಿದೆ. ಮನಸೂರಿನ ಹೊರವಲಯದ ಜಮೀನಿನಲ್ಲಿ ಕರ್ನಾಟಕ ಅಗ್ನಿಹೋತ್ರ ಸ್ಪೆಕ್ಟ್ಯಾಕ್ಯುಲರ್ ಕಾರ್ಯಕ್ರಮದಲ್ಲಿ 11,111 ಕುಟುಂಬಗಳ ಸದಸ್ಯರು ಸೂರ್ಯಾಸ್ತದ ಸಮಯಕ್ಕೆ ಅಗ್ನಿಹೋತ್ರದಲ್ಲಿ ಪಾಲ್ಗೊಂಡು ದಾಖಲೆ ನಿರ್ಮಿಸಿದರು.
ನೋಬೆಲ್ ವರ್ಲ್ಡ್ ರೆಕಾರ್ಡ್ ತಂಡದ ನಾಲ್ವರು ಸದಸ್ಯರು ದಾಖಲೆಯನ್ನು ಘೋಷಿಸಿದರು. ಗ್ರಾಮ ವಿಕಾಸ ಸೊಸೈಟಿಯ ಅಧ್ಯಕ್ಷ ಜಗದೀಶ ಶೇಖರ ನಾಯಿಕ ನೇತೃತ್ವದಲ್ಲಿ ಅಗ್ನಿಹೋತ್ರ ಕಾರ್ಯಕ್ರಮ ನಡೆಯಿತು. ಬಳಿಕ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾಧ್ಯಮದವರೊಂದಿಗೆ ಮಾತನಾಡಿ, "ಅಗ್ನಿಹೋತ್ರ ಅನ್ನೋದು ಸನಾತನ ಪರಂಪರೆಯಲ್ಲಿ ಬಂದಿರುವುದು ಕೇವಲ ಹಿಂದೂಗಳ ಅಷ್ಟೇ ಅಲ್ಲದೇ ಮುಸ್ಲಿಂ, ಕ್ರೈಸ್ತರು ಸೇರಿದಂತೆ ವಿವಿಧ ಜನರು ಭಾಗವಹಿಸಿದ್ದು, ಭಾರತದ ಮೂಲ ಇರುವುದು ಎನರ್ಜಿಯ ಸೃಷ್ಟಿಯಲ್ಲಿದೆ. ಜಲದಲ್ಲಿದೆ. ಸೂರ್ಯನಲ್ಲಿದೆ. ಭೂಮಿಯಲ್ಲಿದೆ. ಪಾಸಿಟಿವ್ ಎನರ್ಜಿಯ ಜೊತೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡುವುದು ವೈಜ್ಞಾನಿಕವಾಗಿ ಸಿದ್ದಗೊಂಡಿರುವ ಸತ್ಯವಿದು" ಎಂದರು.
ಏನಿದು ಅಗ್ನಿ ಹೋತ್ರ ಹೋಮ?: ವೈದಿಕ ಪರಂಪರೆಯಲ್ಲಿ ಯಾವಾಗಲೂ ಯಾಗ, ಹೋಮ, ಹವನಾದಿಗಳು ನಡೆಯುತ್ತಿತ್ತು. ಆದರೆ ದಿನಕಳೆದಂತೆ ಯಜ್ಞ, ಹೋಮಗಳನ್ನು ಮಾಡಲು ಸಮಯ ಇರುವುದಿಲ್ಲ ಎಂದು ಅವುಗಳನ್ನು ಅಲ್ಲಗಳೆಯುತ್ತಿದ್ದೇವೆ. ಆದರೆ, ಈ ಹೋಮವನ್ನು ಅತ್ಯಂತ ಸರಳವಾಗಿ ಮತ್ತು ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಮನೆಯಲ್ಲೇ ಮಾಡಬಹುದು. ಅದುವೇ 'ಅಗ್ನಿ ಹೋತ್ರ ಹೋಮ'.
ಈ ಹೋಮದಿಂದಾಗುವ ಲಾಭಗಳೇನು?: ಸರಳ ಹೋಮ ಪದ್ಧತಿ ಇದಾಗಿದ್ದು, ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ಕೇವಲ 15 ನಿಮಿಷಗಳಲ್ಲಿ ಈ ಹೋಮವನ್ನು ಮಾಡಬಹುದು. ಇದನ್ನು ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ ಹಾಗೂ ಒತ್ತಡದಿಂದ ನಿವಾರಣೆ ನೀಡುತ್ತದೆ ಎನ್ನುವುದು ನಂಬಿಕೆ.
ಹೋಮ ಮಾಡುವುದರಿಂದ ನರಮಂಡಲವು ಹೊಸ ಚೈತನ್ಯವನ್ನು ಪಡೆದುಕೊಂಡು ದೇಹ ಮತ್ತು ಮನಸ್ಸನ್ನು ಲವಲವಿಕೆಯಿಂದಿಡುತ್ತದೆ. ಈ ಅಗ್ನಿಹೋತ್ರದಿಂದ ಪರಿಸರ ಮಾಲಿನ್ಯವು ಕಡಿಮೆಯಾಗುತ್ತದೆ. ಅಗ್ನಿಹೋತ್ರ ಹೋಮದ ಬೂದಿಯಿಂದ ಅನೇಕ ಕಾಯಿಲೆಗಳು ಗುಣವಾಗುತ್ತದೆ. ಅಷ್ಟೇ ಅಲ್ಲ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.