ಬೆಂಗಳೂರು, ಮಾ 17 (DaijiworldNews/DB): ಹಿಜಾಬ್ ವಿವಾದದಿಂದ ಪರೀಕ್ಷೆಗಳಿಗೆ ಗೈರಾದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿಗೆ ಅವರ ಶೈಕ್ಷಣಿಕ ಹಿತದೃಷ್ಟಿಯಿಂದ ಉಚ್ಛ ನ್ಯಾಯಾಲಯದ ತೀರ್ಪಿನಂತೆ ಹಿಜಾಬ್ ತೆಗೆದಿರಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಸದನದಲ್ಲಿ ಗುರುವಾರ ಸರ್ಕಾರವನ್ನು ಒತ್ತಾಯಿಸಿದರು.
ವಿವಾದ ಉಂಟಾಗಿದ್ದ ಸಂದರ್ಭದಲ್ಲಿ ವಿವಿಧ ಕಾಲೇಜುಗಳಲ್ಲಿ ಪ್ರಿಪರೇಟರಿ ಪರೀಕ್ಷೆಗಳು ನಡೆಯುತ್ತಿತ್ತು. ಈ ಪರೀಕ್ಷೆಗಳಿಗೆ ಕೆಲವು ವಿದ್ಯಾರ್ಥಿನಿಯರು ಹೋಗದೇ ಗೈರಾಗಿದ್ದರು. ಇದೀಗ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂಬುದಾಗಿ ಹೈಕೋರ್ಟ್ ಆದೇಶ ನೀಡಿರುವುದರಿಂದ ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯುವ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದವರು ಬೇಡಿಕೆ ಮಂಡಿಸಿದರು.
ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಈ ಒತ್ತಾಯ ಮಾಡಲಾಗುತ್ತಿದೆ. ಆದರೆ ತೀರ್ಪು ಬಂದ ನಂತರವೂ ಹಿಜಬ್ ಧರಿಸಿಕೊಂಡು ಶಾಲಾ ಕಾಲೇಜುಗಳಿಗೆ ಬಂದು ಅಶಾಂತಿ ಉಂಟು ಮಾಡಿ ವಾತಾವರಣ ಕೆಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದರು.
ಹೈಕೋರ್ಟ್ ತೀರ್ಪು ಬಗ್ಗೆ ಅಸಮಾಧಾನವಿದ್ದರೆ ಅವರಿಗೆ ಸುಪ್ರೀಂ ಕೋರ್ಟ್ ಗೆ ಹೋಗಲು ಅವಕಾಶವಿದೆ. ಅದು ಬಿಟ್ಟು ಕಾಲೇಜಿಗೆ ಬಂದು ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದವರು ಇದೇ ವೇಳೆ ತಿಳಿಸಿದರು.