ಹುಬ್ಬಳ್ಳಿ, ಏ 10 (DaijiworldNews/DB): ಎಲ್ಲಾ ಮುಸ್ಲಿಮರು ಕೆಟ್ಟವರೆಂಬ ಭಾವನೆ ಒಳ್ಳೆಯದಲ್ಲ. ಮುಸ್ಲಿಂ ವರ್ತಕರ ಅಂಗಡಿಗಳಿಗೆ ಹಾನಿ ಮಾಡಿ ಹಲ್ಲೆ ನಡೆಸಿರುವುದು ಅಕ್ಷಮ್ಯ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಕೋಮು ಸೌಹಾರ್ದತೆಯಿಂದ ಬದುಕಬೇಕಾದುದು ಇಂದಿನ ಅವಶ್ಯವಾಗಿದೆ. ದೇಶದ ಎಲ್ಲಾ ಮುಸ್ಲಿಮರು ಕೆಟ್ಟವರೆಂದು ಭಾವಿಸುವುದು ಸರಿಯಲ್ಲ. ಧಾರವಾಡದ ನುಗ್ಗಿಕೇರಿಯಲ್ಲಿ ಮುಸ್ಲಿಂ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿ, ಅಂಗಡಿಗೆ ಹಾನಿ ಮಾಡಿರುವ ಕೆಲ ಸಂಘಟನೆಗಳ ಕ್ರಮ ಸರಿಯಲ್ಲ. ಇಂತಹವುಗಳನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದರು.
ಇಸ್ಲಾಂ ಮೂಲಭೂತವಾದಿಗಳು, ಭಯೋತ್ಪಾದನೆ ಚಟುವಟಿಕೆಗಳಲ್ಲಿ ಭಾಗೀದಾರರಾಗಿರುವ ಹಾಗೂ ದೇಶದ ಬಗ್ಗೆ ಕಾಳಜಿ ಹೊಂದಿಲ್ಲದ ಸಂಘಟನೆ, ವ್ಯಕ್ತಿಗಳ ವಿರುದ್ಧ ಪ್ರಜಾಪ್ರಭುತ್ವ ರೀತಿಯಲ್ಲಿ ಪ್ರತಿಭಟಿಸಬೇಕು. ಆದರೆ ತಮ್ಮಷ್ಟಕ್ಕೆ ವ್ಯಾಪಾರದಲ್ಲಿ ತೊಡಗಿರುವವರ ಮೇಲೆ ಹಲ್ಲೆ, ಹಾನಿ ಮಾಡಿ ಕಾನೂನು ಕೈಗೆತ್ತಿಕೊಳ್ಳುವುದು ಸಲ್ಲ ಎಂದವರು ತಿಳಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿಯಿಂದ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಸ್ಪರ್ಧಿಸುವ ಬಗ್ಗೆ ನನಗೆ ಮಾಹಿತಿ ಇಲ್ಲ. ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಮುಖ್ಯಮಂತ್ರಿಯವರು ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.