ನವದೆಹಲಿ, ಆ 26 (DaijiworldNews/DB): ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಗುಲಾಂ ನಬಿ ಅವರ ರಾಜೀನಾಮೆಯಿಂದ ಕಾಂಗ್ರೆಸ್ಗೆ ಭಾರೀ ಹಿನ್ನಡೆಯಾದಂತಾಗಿದೆ.
ರಾಜೀನಾಮೆ ಪತ್ರದಲ್ಲಿ ಗಾಂಧಿ ಕುಟುಂಬ ಮತ್ತು ಸಂಘಟನಾ ನಾಯಕತ್ವದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದು, ಹಿರಿಯ ಕಾಂಗ್ರೆಸ್ಸಿಗರನ್ನು ಅವಗಣನೆ ಮಾಡಲಾಗುತ್ತಿದೆ. ಆದರೆ ಅನುಭವರಹಿತರಿಗೆ ಮಣೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.
ಪಕ್ಷದಲ್ಲಿ ವ್ಯವಸ್ಥಿತವಾಗಿ ಬದಲಾವಣೆ, ನಾಯಕತ್ವ ಕಾರ್ಯನಿರ್ವಹಣೆ ರೀತಿ ಬದಲಾವಣೆ ಒತ್ತಾಯಿಸಿದ ಜಿ 23 ನಾಯಕರ ಗುಂಪಿನಲ್ಲಿ ಗುಲಾಂ ನಬಿ ಆಜಾದ್ ಒಬ್ಬರಾಗಿದ್ದರು. ಜಮ್ಮು ಕಾಶ್ಮೀರದ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಅವರು ಕೆಲ ದಿನಗಳ ಹಿಂದಷ್ಟೇ ಅನಾರೋಗ್ಯದ ಕಾರಣ ನೀಡಿ ಆ ಸ್ಥಾನದಿಂದ ಕೆಳಗಿಳಿದಿದ್ದರು. ಪಕ್ಷದ ಜಮ್ಮು ಕಾಶ್ಮೀರ ರಾಜಕೀಯ ವ್ಯವಹಾರ ಸಮಿತಿಗೂ ಆಜಾದ್ ರಾಜೀನಾಮೆ ಸಲ್ಲಿಸಿದ್ದರು.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ಆನಂದ್ ಶರ್ಮಾ ಅವರು ಪಕ್ಷದ ಪ್ರಮುಖ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಇದೀಗ ಗುಲಾಂ ನಬಿ ಆಜಾದ್ ರಾಜೀನಾಮೆ ಸಲ್ಲಿಸಿದ್ದಾರೆ.