ಅನಕಾಪಲ್ಲಿ(ಆಂಧ್ರಪ್ರದೇಶ), ಸೆ 14 (DaijiworldNews/DB): ಗರ್ಭಿಣಿಯೋರ್ವರು ರೈಲು ಪ್ರಯಾಣದ ವೇಳೆಯೇ ಮಗುವಿಗೆ ಜನ್ಮ ನೀಡಿದ ಘಟನೆ ಸಿಕಂದರಾಬಾದ್ ದುರಂತೋ ಎಕ್ಸ್ ಪ್ರೆಸ್ ರೈಲಿನಲ್ಲಿ ಮಂಗಳವಾರ ನಡೆದಿದೆ. ಹೆರಿಗೆಗೆ ವೈದ್ಯಕೀಯ ವಿದ್ಯಾರ್ಥಿನಿಯೋರ್ವರು ಸಹಾಯ ಮಾಡಿದ್ದಾರೆ.
ಶ್ರೀಕಾಕುಳಂ ಮೂಲದ ಗರ್ಭಿಣಿ ಸಿಕಂದರಾಬಾದ್ ದುರಂತೋ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರೈಲು ಅನಕಾಪಲ್ಲಿ ನಿಲ್ದಾಣಕ್ಕೆ ಸಮೀಪದಲ್ಲಿರುವಾಗ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಇದನ್ನು ನೋಡಿದ ಅದೇ ಕೋಚ್ನಲ್ಲಿದ್ದ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಮಹಿಳೆಗೆ ಸಹಾಯ ಮಾಡಲು ಮುಂದಾಗಿ ಕೂಡಲೇ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ಅನಕಾಪಲ್ಲಿ ನಿಲ್ದಾಣದಲ್ಲಿ ರೈಲು ನಿಂತ ಕೂಡಲೇ ಸಹ ಪ್ರಯಾಣಿಕರು ಮತ್ತು ಕುಟುಂಬಿಕರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಪ್ರಯಾಣದ ವೇಳೆ ಹೆರಿಗೆಗೆ ಸಹಕರಿಸಿದ ವಿದ್ಯಾರ್ಥಿನಿಗೆ ಮಹಿಳೆ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.